ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರವನ್ನು ಏಕಾಏಕಿ 990 ರೂ.ಗಳಷ್ಟು ಹೆಚ್ಚಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ನಗರದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರದ ಜನವಿರೋಧಿ ಹಾಗೂ ಬೆಲೆ ಏರಿಕೆ ನೀತಿಗಳನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಂಚರಾಜ್ಯಗಳ ಚುನಾವಣೆಯ ಮತದಾನ ಮುಕ್ತಾಯವಾದ ತಕ್ಷಣ ಇರಾನ್-ಅಮೆರಿಕ ಯುದ್ಧದ ನೆಪವೊಡ್ಡಿ ಅಡುಗೆ ಅನಿಲದ ದರವನ್ನು ಏರಿಸಲಾಗಿದೆ. ಇದರ ಪರಿಣಾಮವಾಗಿ ಸಾಮಾನ್ಯ ಜನತೆ, ಮಧ್ಯಮ ವರ್ಗ ಹಾಗೂ ಹೋಟೆಲ್ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಹಾಗೂ ನಿರಂತರ ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದ ಹೋಟೆಲ್ ಮಾಲಕರಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೂ ನೇರ ಪರಿಣಾಮ ಉಂಟಾಗಿದೆ. ಸಣ್ಣ ಮತ್ತು ಮಧ್ಯಮ ಮಟ್ಟದ ಹೋಟೆಲ್‌ಗಳು ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ದರ ಏರಿಕೆಯ ಪರಿಣಾಮವಾಗಿ ಉಡುಪಿಯಲ್ಲೇ ಸುಮಾರು 50ರಿಂದ 60 ಸಣ್ಣಪುಟ್ಟ ಹೋಟೆಲ್‌ಗಳು ಬಾಗಿಲು ಮುಚ್ಚಿವೆ ಎಂದು ಆರೋಪಿಸಿದರು.
ಹೋಟೆಲ್ ಉದ್ಯಮವನ್ನು ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರಕ್ಕೆ ಬಡವರ ಜೀವನದ ಬಗ್ಗೆ ಯಾವುದೇ ಕಾಳಜಿ ಇಲ್ಲ. ನಿರಂತರ ಬೆಲೆ ಏರಿಕೆ ಮೂಲಕ ಜನರ ಬದುಕನ್ನು ದುಸ್ತರಗೊಳಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಣ್ಣ ಉದ್ದಿಮೆದಾರರು ಹಾಗೂ ವ್ಯಾಪಾರಿಗಳ ಮೇಲೆ ನಿರಂತರವಾಗಿ ಪ್ರಹಾರ ಮಾಡುತ್ತಿದೆ. ಈಗಾಗಲೇ ನಿರುದ್ಯೋಗ, ಬೆಲೆ ಏರಿಕೆ ಮತ್ತು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಜನಸಾಮಾನ್ಯರನ್ನು ಇನ್ನಷ್ಟು ಕಷ್ಟಕ್ಕೆ ತಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ಮಾಡುವ ಪ್ರಯತ್ನ ನಡೆಯುತ್ತಿದೆ. ಜನರ ಗಮನ ಬೇರೆಡೆ ಸೆಳೆಯಲು ಯುದ್ಧದಂತಹ ವಿಷಯಗಳನ್ನು ಬಳಸಿಕೊಂಡು ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ತಕ್ಷಣವೇ ವಾಣಿಜ್ಯ ಸಿಲಿಂಡರ್ ದರ ಏರಿಕೆಯನ್ನು ಹಿಂಪಡೆದು ಜನರಿಗೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರಯ್ಯಾ ಅಂಜುಮ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ‘ಅಚ್ಛೇದಿನ್’ ಸಾಮಾನ್ಯ ಜನರಿಗೆ ಬಂದಿಲ್ಲ. ಅದು ಬಿಜೆಪಿಯ ನಾಯಕರಿಗೆ ಹಾಗೂ ಅವರ ಕಾರ್ಪೋರೇಟ್ ಸ್ನೇಹಿತರಿಗೆ ಮಾತ್ರ ಸೀಮಿತವಾಗಿದೆ ಎಂದು ವಾಗ್ದಾಳಿ ನಡೆಸಿದರು.
ತಮ್ಮ ಅಂಧಭಕ್ತರ ಮೂಲಕ ಕೇಂದ್ರ ಸರ್ಕಾರದ ಎಲ್ಲಾ ಜನವಿರೋಧಿ ನೀತಿಗಳನ್ನು ಜನಪರವೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ವಾಸ್ತವದಲ್ಲಿ ದೇಶದ ಜನರು ನಿರಂತರ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಆರ್ಥಿಕ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರಿಪ್ರಸಾದ್ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಅಲೆವೂರು ಹರೀಶ್ ಕಿಣಿ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಶಬರೀಶ್ ಸುವರ್ಣ, ಸಜ್ಜನ್ ಶೆಟ್ಟಿ, ನವೀನ್ ಸಾಲ್ಯಾನ್, ಅಕ್ಷತ್ ಪೈ ಸೇರಿದಂತೆ ಹಲವರು ಭಾಗವಹಿಸಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions