Advertisement

ಉಡುಪಿ | ಕಸ್ತೂರಿ ರಂಗನ್ ವರದಿ ಅಧಿಸೂಚನೆ ತಕ್ಷಣ ಹಿಂಪಡೆಯಿರಿ: ಕಾಂಗ್ರೆಸ್ ಆಗ್ರಹ

ಪಶ್ಚಿಮ ಘಟ್ಟ ಹಾಗೂ ಅದರ ತಪ್ಪಲು ಪ್ರದೇಶಗಳ ನಿವಾಸಿಗಳಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿ ಅಧಿಸೂಚನೆಯನ್ನು ಕೇಂದ್ರ ಸರಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಹೆಬ್ರಿ–ಕಾರ್ಕಳ ಭಾಗದ ಕಾಂಗ್ರೆಸ್ ನಾಯಕರು ಆಗ್ರಹಿಸಿದರು.

ಮುನಿಯಾಲು ಉದಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಉಡುಪಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಕೇಂದ್ರ ಸರಕಾರ ಏಳನೇ ಬಾರಿಗೆ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅಧಿಸೂಚನೆ ಹೊರಡಿಸಿರುವುದು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ ಎಂದು ಹೇಳಿದರು.

ಸೆ.18ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೆಬ್ರಿ ತಾಲೂಕಿಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ವರದಿಯಿಂದ ಬಾಧಿತ ಪ್ರದೇಶಗಳ ಜನರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಒಟ್ಟು 35 ಗ್ರಾಮಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುತ್ತಿವೆ. ಜನವಿರೋಧಿ ಅಧಿಸೂಚನೆಯನ್ನು ಕೇಂದ್ರ ಸರಕಾರ ಕೂಡಲೇ ಹಿಂಪಡೆಯಬೇಕು. ಈ ವಿಚಾರದಲ್ಲಿ ನಾವು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದೇವೆ ಎಂದು ಮುಖಂಡರು ಹೇಳಿದರು.

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳ ಜನರು ನೂರಾರು ವರ್ಷಗಳಿಂದ ಭತ್ತ, ತೆಂಗು, ಕಾಳುಮೆಣಸು, ತರಕಾರಿ, ರಬ್ಬರ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಕೇಂದ್ರ ಸರಕಾರದ ಅಧಿಸೂಚನೆಯಿಂದ ಸ್ಥಳೀಯರಲ್ಲಿ ತಮ್ಮ ಭೂಹಕ್ಕು ಹಾಗೂ ಭವಿಷ್ಯದ ಬದುಕಿನ ಕುರಿತು ಆತಂಕ ಉಂಟಾಗಿದೆ ಎಂದು ಹೇಳಿದರು.

ಸ್ಥಳೀಯರ ಭೂಹಕ್ಕಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗಬಾರದು ಹಾಗೂ ಜನರು ನಿರಾತಂಕವಾಗಿ ತಮ್ಮ ಜೀವನ ನಡೆಸುವಂತಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.

ಸ್ಥಳೀಯರ ಅಹವಾಲುಗಳನ್ನು ಆಲಿಸದೆ, ಗ್ರಾಮಸಭೆಗಳನ್ನು ನಡೆಸದೆ ಕೇವಲ ವೈಮಾನಿಕ ಸಮೀಕ್ಷೆ ನಡೆಸಿ, ಎಸಿ ರೂಮಿನಲ್ಲಿ ಕುಳಿತು ಪಶ್ಚಿಮ ಘಟ್ಟವನ್ನು ರಕ್ಷಿಸುತ್ತೇವೆ ಎಂದು ವರದಿ ರೂಪಿಸುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಕಳೆದ ಮೂರು ದಶಕಗಳಿಂದ ಕರಾವಳಿಯಲ್ಲಿ ಬಿಜೆಪಿ ಸತತವಾಗಿ ಚುನಾವಣೆಯಲ್ಲಿ ಗೆಲ್ಲುತ್ತಾ ಬಂದಿದ್ದರೂ ಈ ಭಾಗದ ಜನರಿಗೆ ಬಿಜೆಪಿಯ ಕೊಡುಗೆ ಶೂನ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ತುಳುನಾಡಿನ ಜನರು ಬಿಜೆಪಿಗೆ ಅಧಿಕಾರ ನೀಡಿದ್ದರೂ, ಅದಕ್ಕೆ ಪ್ರತಿಯಾಗಿ ಬಿಜೆಪಿ ಕರಾವಳಿಗೆ ಯಾವುದೇ ಮಹತ್ವದ ಕೊಡುಗೆ ನೀಡದೆ ಮೋಸ ಮಾಡಿದೆ. ಧರ್ಮಗಳ ನಡುವೆ ಸಂಘರ್ಷ ಹಾಗೂ ಗಲಭೆಗಳಿಗೆ ಕಾರಣವಾಗುವ ವಾತಾವರಣ ಸೃಷ್ಟಿಸಿ ಜಿಲ್ಲೆಯ ಶಾಂತಿ, ಸೌಹಾರ್ದತೆಯನ್ನು ಹಾಳುಗೆಡವಿರುವುದೇ ಬಿಜೆಪಿಯ ಕೊಡುಗೆ ಎಂದು ಟೀಕಿಸಿದರು.

ಕರಾವಳಿ ಜಿಲ್ಲೆಗಳು ರಾಜ್ಯದ ಸೇವಾ ವಲಯದಲ್ಲಿ ಪ್ರಮುಖ ಸ್ಥಾನ ಹೊಂದಿವೆ. ಹೋಟೆಲ್ ಉದ್ಯಮ, ಬ್ಯಾಂಕಿಂಗ್, ಶಿಕ್ಷಣ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರಾವಳಿಯ ಕೊಡುಗೆ ಅಪಾರವಾಗಿದೆ. ರಾಜ್ಯದ ತಲಾದಾಯದಲ್ಲಿಯೂ ಕರಾವಳಿ ಜಿಲ್ಲೆಗಳು ಬೆಂಗಳೂರಿನ ನಂತರದ ಸ್ಥಾನದಲ್ಲಿವೆ ಎಂದು ಹೇಳಿದರು.

ಕರಾವಳಿಯು ರಾಜ್ಯದ ಪ್ರಮುಖ ವಾಣಿಜ್ಯ ಪ್ರದೇಶವಾಗಿ ಬೆಳೆಯುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಶೇಷ ಘೋಷಣೆಗಳನ್ನು ಮಾಡಬೇಕು ಎಂದು ಆಗ್ರಹಿಸಿದರು.

ಕರಾವಳಿಯ ಲಕ್ಷಾಂತರ ಜನರ ಮಾತೃಭಾಷೆಯಾಗಿರುವ ತುಳುವನ್ನು ಅಧಿಕೃತ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.

ಅಲ್ಲದೆ, ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು. ತುಳುವರ ಭಾಷೆ, ಸಂಸ್ಕೃತಿ ಹಾಗೂ ಅಭಿವೃದ್ಧಿಗೆ ತುಳು ಅಭಿವೃದ್ಧಿ ನಿಗಮವನ್ನು ಘೋಷಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಗೋಪಿನಾಥ್ ಭಟ್, ಯೋಗೀಶ್ ಆಚಾರ್ಯ, ಪ್ರದೀಪ್ ಬೇಲಾಡಿ, ಅಜಿತ್ ಹೆಗ್ಡೆ, ಅನಿಲ್ ಪೂಜಾರಿ ಮಾಳ ಹಾಗೂ ಭಾನುಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions