ರುದ್ರ ದೇವರು ತನ್ನನ್ನು ನಂಬಿದ ಭಕ್ತರ ದುಃಖವನ್ನು ಪರಿಹರಿಸುವ ಕೆಲಸ ಮಾಡುತ್ತಾರೆ. ಅತ್ಯಂತ ಭಕ್ತಿಯಿಂದ ಪ್ರಾರ್ಥಿಸುವ ಭಕ್ತರ ಎಲ್ಲ ಕಷ್ಟಕಾರ್ಪಣ್ಯಗಳನ್ನು ದೂರ ಮಾಡುತ್ತಾರೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಹಾ ರುದ್ರಯಾಗದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಉಡುಪಿ ಪರ್ಯಾಯ ಮಹೋತ್ಸವದ ಮಾದರಿಯಲ್ಲೇ ಕೊಡವೂರಿನಲ್ಲಿ ಈ ಮಹಾರುದ್ರಯಾಗ ನಡೆಯುತ್ತಿರುವುದು ಸಂತೋಷದ ವಿಚಾರ. ಇದರ ಮುಖ್ಯ ರೂವಾರಿ ಪ್ರಸಾದ್ ರಾಜ್ ಕಾಂಚನ್ ಎಂದು ಹೇಳಲು ಸಂತೋಷವಾಗುತ್ತದೆ ಎಂದರು.

ಪ್ರಸಾದ್ ರಾಜ್ ಕಾಂಚನ್ ಅವರಿಗೆ ಉತ್ತಮ ಸ್ಥಾನಮಾನ ಸಿಗಲಿ ಎಂದು ಹಾರೈಸಿದ ಅವರು, “ಉಡುಪಿಗೆ ಒಳ್ಳೆಯ ನಾಯಕನ ಅಗತ್ಯವಿದೆ. ನಾನು ಯಾವುದೇ ಪಕ್ಷದ ಪರವಲ್ಲ. ಸಾತ್ವಿಕ ಹಾಗೂ ಉಪಕಾರಿ ವ್ಯಕ್ತಿ ಉಡುಪಿಯ ನಾಯಕನಾಗಿ ಬರಬೇಕು. ಉಡುಪಿ ಇನ್ನಷ್ಟು ಅಭಿವೃದ್ಧಿಯಾಗಬೇಕು. ಜನರಿಗೆ ಉತ್ತಮ ಸೌಲಭ್ಯಗಳು ದೊರಕಬೇಕು” ಎಂದರು.

“ಕಾಂಚನ್ ಅವರು ಬಂಗಾರದ ಮನುಷ್ಯ. ಅವರ ಮನಸ್ಸೂ ಬಂಗಾರದಂತೆಯೇ ಇದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಪಡೆದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿಯೂ ಉತ್ತಮ ಸ್ಥಾನಮಾನ ಪಡೆಯುವ ಅನುಗ್ರಹವನ್ನು ಶಂಕರನಾರಾಯಣ ದೇವರು ಅವರಿಗೆ ನೀಡಲಿ” ಎಂದು ಆಶೀರ್ವದಿಸಿದರು.
ಮಹಾರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸೇವಾಕರ್ತರಾದ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಧಾರ್ಮಿಕತೆಯ ಜೊತೆಗೆ ಸಾಮಾಜಿಕ, ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯದ ಸಂಕಲ್ಪದೊಂದಿಗೆ ಈ ಮಹಾ ರುದ್ರಯಾಗವನ್ನು ಹಮ್ಮಿಕೊಂಡಿದ್ದೇವೆ ಎಂದರು.
“ಕರಾವಳಿ ಜಿಲ್ಲೆ ಮೀನುಗಾರಿಕೆಯನ್ನು ಅವಲಂಬಿಸಿದೆ. ಕಳೆದ ಹತ್ತು ವರ್ಷಗಳಿಂದ ಮೀನುಗಾರಿಕೆ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಕಾಶಿಯ ಪುರೋಹಿತರನ್ನು ಕರೆಸಿ ಅರಬ್ಬೀ ಸಮುದ್ರಕ್ಕೆ ಗಂಗಾರತಿ ಮಾಡುವ ದೊಡ್ಡ ಸಂಕಲ್ಪ ಕೈಗೊಂಡಿದ್ದೇವೆ. ಉಡುಪಿ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲೂ ಮುಂದಿದ್ದು, ಅದನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು. ಇಂತಹ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಉದ್ಯಮಿಗಳು ಮುಂದಾಗಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಆನಂದ ಪಿ. ಸುವರ್ಣ, ವೆರೋನಿಕಾ ಕರ್ನೇಲಿಯೋ, ದಿವಾಕರ ಶೆಟ್ಟಿ, ವಿಠಲ ಪೂಜಾರಿ, ಮಾಧವ ಬನ್ನಂಜೆ, ರಾಮಪ್ಪ ಸಾಲಿಯಾನ್, ಹರೀಶ್ ಶೆಟ್ಟಿ, ತಾರನಾಥ ಪೂಜಾರಿ, ಸಂತೋಷ್ ನಾಯ್ಕ್, ಕುಶಾಲ್ ಸಾಲಿಯಾನ್, ಕೃಷ್ಣಪ್ಪ ಗುರಿಕಾರ್ ಹಾಗೂ ಗೋಪಾಲ್ ಸಿ. ಬಂಗೇರ ಉಪಸ್ಥಿತರಿದ್ದರು.
ಕೊಡವೂರು ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಸ್ವಾಗತಿಸಿದರು.

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions