Advertisement

ಹಿಜಾಬ್ ಸೇರಿದಂತೆ ಸಾಂಪ್ರದಾಯಿಕ ಸಂಕೇತಗಳಿಗೆ ಅನುಮತಿ: 2022ರ ಸಮವಸ್ತ್ರ ಆದೇಶ ಹಿಂಪಡೆದ ರಾಜ್ಯ ಸರ್ಕಾರ

ರಾಜ್ಯದ ಶಾಲಾ-ಕಾಲೇಜುಗಳ ಸಮವಸ್ತ್ರ ನಿಯಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. 2022ರ ಫೆಬ್ರವರಿ 05ರಂದು ಹೊರಡಿಸಲಾಗಿದ್ದ ಸಮವಸ್ತ್ರ ಕುರಿತ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಹಿಂಪಡೆದಿದೆ.

2026ರ ಮೇ 13ರಂದು ಹೊರಡಿಸಿದ ಹೊಸ ನಿರ್ದೇಶನದಂತೆ, ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳು ತಮ್ಮ ನಿಯಮಾನುಸಾರ ಸಮವಸ್ತ್ರವನ್ನು ಕಡ್ಡಾಯಗೊಳಿಸಬಹುದಾಗಿದೆ. ಆದರೆ, ಸಮವಸ್ತ್ರದ ಜೊತೆಗೆ ವಿದ್ಯಾರ್ಥಿಗಳು ಪೇಟ, ಜನಿವಾರ, ಶಿವದಾರ, ರುದ್ರಾಕ್ಷಿ ಹಾಗೂ ತಲೆವಸ್ತ್ರ ಅಥವಾ ಹಿಜಾಬ್ ಸೇರಿದಂತೆ ಸೀಮಿತ ಸಾಂಪ್ರದಾಯಿಕ ಮತ್ತು ನಂಬಿಕೆ ಆಧಾರಿತ ಸಂಕೇತಗಳನ್ನು ಧರಿಸಲು ಅವಕಾಶ ನೀಡಲಾಗಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ Kendriya Vidyalaya Sangathan ಶಾಲೆಗಳಲ್ಲಿ ಅನುಸರಿಸಲಾಗುತ್ತಿರುವ ವಸ್ತ್ರ ಸಂಹಿತೆಯ ನಿಯಮಗಳನ್ನು ಪರಿಶೀಲಿಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದಲ್ಲದೆ, ಸಮವಸ್ತ್ರದೊಂದಿಗೆ ಇಂತಹ ನಂಬಿಕೆ ಆಧಾರಿತ ಸಂಕೇತಗಳನ್ನು ಧರಿಸಿರುವ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ, ತರಗತಿ, ಪರೀಕ್ಷಾ ಕೊಠಡಿ ಅಥವಾ ಇತರೆ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.

ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಮತ್ತು ಸಾಂವಿಧಾನಿಕ ಮೌಲ್ಯಗಳ ಬೆಳೆಸುವ ಪ್ರಮುಖ ಸಾಧನವಾಗಿದ್ದು, ಸೀಮಿತ ನಂಬಿಕೆ ಆಧಾರಿತ ಆಚರಣೆಗಳಿಂದ ಯಾರಿಗೂ ಶಿಕ್ಷಣದ ಹಕ್ಕು ಕಸಿದುಕೊಳ್ಳಬಾರದು ಎಂಬ ಉದ್ದೇಶದಿಂದ ಈ ಹೊಸ ಆದೇಶ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions