ಉಡುಪಿ ಸಮೀಪದ ಕಟಪಾಡಿಯ ಎಸ್‌ವಿಎಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಮೇ 22ರಿಂದ 24ರವರೆಗೆ ನಡೆಯಲಿರುವ ಮೂರು ದಿನಗಳ ಹಲಸು ಹಣ್ಣು ಮೇಳಕ್ಕೆ ಗುರುವಾರ ಭರ್ಜರಿ ಚಾಲನೆ ದೊರೆಯಿತು. ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಮೇಳಕ್ಕೆ ಉತ್ತಮ ಬೆಂಬಲ ವ್ಯಕ್ತಪಡಿಸಿದರು.

ಮೇಳವನ್ನು ಎಸ್‌ವಿಎಸ್ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯ ಬಿ. ಚಂದ್ರಕಾಂತ ಪೈ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕರಾವಳಿಯ ಸಾಂಪ್ರದಾಯಿಕ ಹಾಗೂ ಪೌಷ್ಟಿಕ ಹಣ್ಣಾದ ಹಲಸಿನ ಮಹತ್ವವನ್ನು ಜನರಿಗೆ ಪರಿಚಯಿಸುವ ಕಾರ್ಯ ಇಂತಹ ಮೇಳಗಳ ಮೂಲಕ ನಡೆಯುತ್ತಿರುವುದು ಶ್ಲಾಘನೀಯ. ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಮೇಳಗಳು ಉತ್ತಮ ವೇದಿಕೆಯಾಗುತ್ತವೆ ಎಂದರು.

ಮೇಳದಲ್ಲಿ ವಿವಿಧ ತಳಿಗಳ ಹಲಸು ಹಣ್ಣುಗಳು, ಹಲಸಿನ ಚಿಪ್ಸ್, ಹಪ್ಪಳ, ಹಲ್ವಾ ಸೇರಿದಂತೆ ಹಲಸಿನಿಂದ ತಯಾರಿಸಲಾದ ಹಲವು ಆಹಾರ ಪದಾರ್ಥಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಸ್ಥಳೀಯ ರೈತರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ತಮ್ಮ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶಿಸಿ ಮಾರಾಟ ಮಾಡಿದರು. ಹಲಸಿನ ವಿವಿಧ ರುಚಿಗಳನ್ನು ಆಸ್ವಾದಿಸಲು ಸಾರ್ವಜನಿಕರು ಹೆಚ್ಚಿನ ಆಸಕ್ತಿ ತೋರಿದರು.

ಕಾರ್ಯಕ್ರಮದಲ್ಲಿ ಎಸ್‌ವಿಎಸ್ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯ ಗಣೇಶ್ ಕಿಣಿ, ಸಂಘದ ಆಡಳಿತಾಧಿಕಾರಿ ಸುಧಾಕರ್ ಬ್ರಹ್ಮಾವರ ಹಾಗೂ ಕಾರ್ಯಕ್ರಮ ಆಯೋಜಕರಾದ ಮಹಮ್ಮದ್ ಮುಖ್ತಾರ್ ಹುಸೇನ್ ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನಿರೀಕ್ಷೆ ಇದೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions