ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲದೆ ಸರಬರಾಜು ನಿಯಮಿತವಾಗಿ ನಡೆಯುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಕೆಲವೆಡೆ ಜನರು ಪ್ಯಾನಿಕ್‌ನಿಂದ ಅಗತ್ಯಕ್ಕಿಂತ ಹೆಚ್ಚು ಸಿಲಿಂಡರ್ ಬುಕ್ಕಿಂಗ್ ಮಾಡುತ್ತಿರುವುದರಿಂದ ಗೊಂದಲ ಉಂಟಾಗುತ್ತಿದೆ. ರಾಜ್ಯದಲ್ಲಿ ಪ್ರತಿದಿನ ಸುಮಾರು 850 ಮೆಟ್ರಿಕ್ ಟನ್ ಗ್ಯಾಸ್ ಪೂರೈಕೆ ಆಗುತ್ತಿದ್ದು, ಬಳಕೆಯ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಗ್ರಾಹಕರು ಮಿತವ್ಯಯವಾಗಿ ಬಳಸುವಂತೆ ಅವರು ಮನವಿ ಮಾಡಿದ್ದಾರೆ.
ಎಲ್‌ಪಿಜಿ ವಿತರಣೆ ಪ್ರತಿ ರಾಜ್ಯದ ಬಳಕೆಯ ಆಧಾರದ ಮೇಲೆ ಕೇಂದ್ರ ಸರ್ಕಾರದಿಂದ ನಿರ್ಧಾರವಾಗುತ್ತದೆ. ರಾಜ್ಯಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ಸಿಲಿಂಡರ್ ಸರಬರಾಜು ಆಗುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಹಾಗೂ ಸಂಬಂಧಿಸಿದ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿದ್ದಲ್ಲಿ ರಾಜ್ಯದ ಅಗತ್ಯಗಳನ್ನು ಪತ್ರಗಳ ಮೂಲಕ ಗಮನಕ್ಕೆ ತರುತ್ತಿದ್ದಾರೆ ಎಂದರು.
ಅತ್ಯಾವಶ್ಯಕ ಸೇವೆಗಳಾದ ಆಸ್ಪತ್ರೆಗಳು ಸೇರಿದಂತೆ ಹೋಟೆಲ್ ಮತ್ತು ವ್ಯಾಪಾರಿಕ ಬಳಕೆದಾರರಿಗೆ ಯಾವುದೇ ರೀತಿಯ ಸರಬರಾಜು ಸಮಸ್ಯೆ ಇಲ್ಲ. ಅವರಿಗೆ ಅಗತ್ಯವಿರುವಷ್ಟು ಸಿಲಿಂಡರ್ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ 25ರಿಂದ 30 ದಿನಗಳಿಗೆ ಒಂದು ಸಿಲಿಂಡರ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು 45 ದಿನಗಳಿಗೆ ಒಂದು ಸಿಲಿಂಡರ್ ಬಳಕೆಯಾಗುತ್ತದೆ. ಇದಕ್ಕೆ ಅನುಗುಣವಾಗಿ ಸರಬರಾಜು ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಜನರು ಪ್ಯಾನಿಕ್ ಆಗದೆ, ಅಗತ್ಯಕ್ಕಿಂತ ಹೆಚ್ಚು ಸಿಲಿಂಡರ್ ಬುಕ್ ಮಾಡಬಾರದು ಹಾಗೂ ಸಿಲಿಂಡರ್‌ಗಳನ್ನು ಸಂಗ್ರಹಿಸಿಡಬಾರದು. ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದರೆ ತಕ್ಷಣ ಸಂಬಂಧಿತ ಕಂಪನಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions