Advertisement

ಹಿಜಾಬ್ ನಿರ್ಬಂಧ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಶರ್ಪುದ್ದೀನ್ ಶೇಖ್ ಸ್ವಾಗತ

ಮುಸ್ಲಿಂ ಬಾಲಕಿಯರು ಧರಿಸುವ ಹಿಜಾಬ್ ಮೇಲಿನ ನಿರ್ಬಂಧವನ್ನು ರಾಜ್ಯ ಸರ್ಕಾರ ಹಿಂಪಡೆದಿರುವ ಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್ ಸ್ವಾಗತಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಿಜಾಬ್ ನಿರ್ಬಂಧ ಹಿಂಪಡೆಯುವುದರ ಜೊತೆಗೆ ಜನಿವಾರ, ರುದ್ರಾಕ್ಷಿ ಮಾಲೆ, ಪೇಟ ಹಾಗೂ ತಲೆವಸ್ತ್ರಗಳನ್ನು ಸಮವಸ್ತ್ರದೊಂದಿಗೆ ಧರಿಸಲು ಅವಕಾಶ ನೀಡಿರುವ ಸರ್ಕಾರದ ಆದೇಶವು ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿದಿದೆ ಎಂದು ತಿಳಿಸಿದ್ದಾರೆ.

ತಮ್ಮ ರಾಜಕೀಯ ಸ್ವಾರ್ಥ ಹಾಗೂ ಸಮುದಾಯಗಳ ನಡುವಿನ ಸಾಮರಸ್ಯ ಹಾಳು ಮಾಡುವ ಉದ್ದೇಶದಿಂದ ಹಿಂದಿನ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರ ಈ ನಿರ್ಬಂಧವನ್ನು ಜಾರಿಗೊಳಿಸಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ಸಮಾನ ಗೌರವ ನೀಡಿ ನ್ಯಾಯ ಒದಗಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಎಲ್ಲಿಯೂ ಕಾಣದಂತಹ ನಿರ್ಬಂಧವನ್ನು ಕರ್ನಾಟಕದಲ್ಲಿ ರಾಜಕೀಯ ಷಡ್ಯಂತ್ರದ ಭಾಗವಾಗಿ ಜಾರಿಗೆ ತರಲಾಗಿತ್ತು. ಆದರೆ ಬಳಿಕ ನಡೆದ ಚುನಾವಣೆಯಲ್ಲಿ ರಾಜ್ಯದ ಜನತೆ ಕೋಮು ಧ್ರುವೀಕರಣದ ರಾಜಕಾರಣವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟರು ಎಂದು ಶರ್ಪುದ್ದೀನ್ ಶೇಖ್ ಹೇಳಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರ “ಸರ್ವ ಜನಾಂಗದ ಶಾಂತಿಯ ತೋಟ” ಪರಿಕಲ್ಪನೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು, ಜಾತ್ಯತೀತ ಮನಸ್ಸುಗಳೆಲ್ಲವೂ ಸರ್ಕಾರದ ಈ ನಿರ್ಧಾರದಿಂದ ಸಂತೃಪ್ತಿಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions