ಮದುವೆಯಾಗಲು ಕಾನೂನಾತ್ಮಕವಾಗಿ ನಿಗದಿಯಾಗಿರುವ ವಯಸ್ಸನ್ನು ತಲುಪದ ಇಬ್ಬರು ವಯಸ್ಕರು, ಸಹಮತದ ಆಧಾರದ ಮೇಲೆ ಸಹಜೀವನ ನಡೆಸಲು ಅರ್ಹರು ಎಂದು ಮಹತ್ವದ ತೀರ್ಪು ಪ್ರಕಟಿಸಿರುವ ರಾಜಸ್ಥಾನ ಹೈಕೋರ್ಟ್, ಅವರ ಸಾಂವಿಧಾನಿಕ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದೆ.
'ಪರಸ್ಪರ ಒಪ್ಪಿಗೆಯ ಮೇರೆಗೆ ನಾವಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದೇವೆ. ನಮಗೆ ರಕ್ಷಣೆ ನೀಡಬೇಕು' ಎಂದು ಕೋರಿ ಕೋಟಾದ 18ರ ಯುವತಿ ಹಾಗೂ 19ರ ಯುವಕ ಸಲ್ಲಿಸಿದ್ದ ಅರ್ಜಿಯ ಮೇಲ್ವಿಚಾರಣೆ ನಡೆಸಿದ ಬಳಿಕ ನ್ಯಾಯಮೂರ್ತಿ ಅನೂಪ್ ಧಂದ್ ಅವರು ಈ ತೀರ್ಪು ನೀಡಿದ್ದಾರೆ.
ಒಪ್ಪಂದದ ಮೇರೆಗೆ ತಾವು ಇದೇ ವರ್ಷ (2025ರ) ಅಕ್ಟೋಬರ್ 27ರಿಂದ ಸಹಜೀವನ ನಡೆಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿರುವ ಜೋಡಿ, ಯುವತಿಯ ಕುಟುಂಬದವರು ಅದಕ್ಕೆ ಅಸಮ್ಮತಿ ಸೂಚಿಸಿದ್ದು, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಸಂಬಂಧ ಕೋಟಾ ಪೊಲೀಸರಿಗೆ ದೂರು ನೀಡಿದ್ದರೂ, ಪರಿಹಾರ ದೊರೆತಿಲ್ಲ ಎಂದು ಅಳಲು ತೋಡಿಕೊಂಡಿದೆ.
ಜೋಡಿಯ ಅರ್ಜಿಯನ್ನು ವಿರೋಧಿಸಿದ ಸರ್ಕಾರಿ ವಕೀಲ ವಿವೇಕ್ ಚೌಧರಿ, ಪುರುಷರು ಮದುವೆಯಾಗಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಯುವಕನಿಗೆ ಅಷ್ಟು ವಯಸ್ಸಾಗಿಲ್ಲದ ಕಾರಣ, ಆ ವ್ಯಕ್ತಿಗೆ ಸಹಜೀವನ ನಡೆಸಲು ಅವಕಾಶ ನೀಡಬಾರದು ಎಂದು ವಾದಿಸಿದರು.
ವಾದವನ್ನು ಪುರಸ್ಕರಿಸದ ನ್ಯಾಯಾಲಯ, ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಕಲ್ಪಿಸಲಾಗಿರುವ ಜೀವಿಸುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು, ಅರ್ಜಿದಾರರಿಗೆ ಕಾನೂನುಬದ್ಧವಾಗಿ ಮದುವೆಯ ವಯಸ್ಸಾಗಿಲ್ಲ ಎಂಬ ಕಾರಣಕ್ಕೆ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
'ಪ್ರತಿಯೊಬ್ಬರ ಬದುಕು ಮತ್ತು ಸ್ವಾತಂತ್ರ್ಯವನ್ನು ಕಾಪಾಡುವುದು ಸರ್ಕಾರದ ಸಾಂವಿಧಾನಿಕ ಹೊಣೆಯಾಗಿದೆ' ಎಂದಿರುವ ನ್ಯಾಯಮೂರ್ತಿಗಳು, ದೇಶದ ಕಾನೂನಿನಲ್ಲಿ ಸಹಜೀವನ ಸಂಬಂಧಕ್ಕೆ ನಿಷೇಧವಿಲ್ಲ. ಅದು ಅಪರಾಧವೂ ಅಲ್ಲ ಎಂದು ಒತ್ತಿ ಹೇಳಿದ್ದಾರೆ.
ಇದೇ ವೇಳೆ, ಅರ್ಜಿದಾರರು ಉಲ್ಲೇಖಿಸಿರುವ ಅಂಶಗಳ ಸತ್ಯಾಸತ್ಯತೆ ಪರಿಶೀಲಿಸಲು ಹಾಗೂ ಅಗತ್ಯವಿದ್ದರೆ ಜೋಡಿಗೆ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಭಿಲ್ವಾರ ಮತ್ತು ಜೋಧಪುರ (ಗ್ರಾಮಾಂತರ) ಜಿಲ್ಲೆಗಳ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions