Advertisement

ಮಲ್ಪೆ–ತೀರ್ಥಹಳ್ಳಿ ಹೆದ್ದಾರಿ ಕಾಮಗಾರಿ ಅಂತಿಮ ಹಂತ; ಬಾಕಿ ಭೂಸ್ವಾಧೀನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ರಾಷ್ಟ್ರೀಯ ಹೆದ್ದಾರಿ 169ಎರ ಮಲ್ಪೆ–ಕರಾವಳಿ ಬೈಪಾಸ್‌ವರೆಗಿನ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಹೆದ್ದಾರಿ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಬೇಕು ಎಂದು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮಲ್ಪೆಯಿಂದ ತೀರ್ಥಹಳ್ಳಿವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಂತಿಮ ಹಂತದಲ್ಲಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲದ ಕಾರಣ ಕಾಮಗಾರಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಕಂದಾಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಭೂಮಿ ಕಳೆದುಕೊಳ್ಳುತ್ತಿರುವ ಮಾಲೀಕರು ವೈಜ್ಞಾನಿಕವಾಗಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕಾಮಗಾರಿ ವಿಳಂಬವಾಗುತ್ತಿರುವುದು ಸರಿಯಲ್ಲ. ಪದೇಪದೇ ಸಭೆ ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸಿದರೂ ಅಧಿಕಾರಿಗಳ ಮಟ್ಟದಲ್ಲಿ ನಿರ್ಲಕ್ಷ್ಯ ಮುಂದುವರಿಯುತ್ತಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪರ್ಕಳದಲ್ಲಿ 8.25 ಕೋಟಿ ರೂ. ನ್ಯಾಯಾಲಯಕ್ಕೆ ಜಮೆ

ನೆನೆಗುದಿಗೆ ಬಿದ್ದಿರುವ ಪರ್ಕಳ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ₹8.25 ಕೋಟಿ ಮೊತ್ತವನ್ನು ನ್ಯಾಯಾಲಯಕ್ಕೆ ಜಮೆ ಮಾಡಲಾಗಿದೆ. 13 ಮಂದಿಗೆ ಸಂಬಂಧಿಸಿದ 419 ಮೀಟರ್ ಪ್ರದೇಶದಲ್ಲಿ ಒಬ್ಬರು ಮಾತ್ರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮರುಸರ್ವೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಿರಿಯಡ್ಕ–ಪೆರ್ಡೂರು ಭೂಸ್ವಾಧೀನ ಪೂರ್ಣ

ಹಿರಿಯಡ್ಕದಿಂದ ಪೆರ್ಡೂರುವರೆಗೆ ಬಾಕಿ ಉಳಿದಿದ್ದ 2.69 ಕಿ.ಮೀ. ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಹೆಬ್ರಿ ಪಾಡಿಗಾರ ಪ್ರದೇಶದಲ್ಲಿ 1.4 ಕಿ.ಮೀ. ವ್ಯಾಪ್ತಿಯಲ್ಲಿ ಮರ ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಿದ್ದರೂ, ಮರಗಳ ತೆರವು ಕಾರ್ಯ ಇನ್ನೂ ಬಾಕಿಯಿದೆ. ಕೂಡಲೇ ಮರಗಳನ್ನು ತೆರವುಗೊಳಿಸಿ ಕಾಮಗಾರಿಗೆ ಅನುವು ಮಾಡಿಕೊಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದರು.

ಹೆಬ್ರಿಯಿಂದ ಆಗುಂಬೆ ಘಾಟಿವರೆಗಿನ ಕಾಮಗಾರಿಗೆ ₹72 ಕೋಟಿ ಅನುದಾನ ಬಿಡುಗಡೆಯಾಗಿದೆ. ಹೆಬ್ರಿ ಬಳಿಕ ಆಗುಂಬೆವರೆಗಿನ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಡಿಪಿಆರ್‌ ಅನ್ನು ತ್ವರಿತವಾಗಿ ಸಿದ್ಧಪಡಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಂಸದರು ತಿಳಿಸಿದರು.

ಕಲ್ಮಾಡಿ–ಮಲ್ಪೆ ಹಾರ್ಬರ್ ಕಾಮಗಾರಿ ನಾಳೆಯಿಂದ

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಭೂಸ್ವಾಧೀನ ಪೂರ್ಣಗೊಂಡಿರುವ ಪ್ರದೇಶಗಳ ಭೂಮಾಲೀಕರಿಗೆ ನೋಟಿಸ್ ನೀಡಿ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಲ್ಮಾಡಿಯಿಂದ ಮಲ್ಪೆ ಹಾರ್ಬರ್‌ವರೆಗಿನ 1.18 ಕಿ.ಮೀ. ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಳೆಯಿಂದಲೇ ಕಾಮಗಾರಿ ಆರಂಭಿಸುವಂತೆ ಅಭಿಯಂತರರಿಗೆ ಸೂಚಿಸಿದರು.

ಪರಿಹಾರ ಬಾಕಿ ಇರುವವರ ಪಟ್ಟಿ ಸಿದ್ಧಪಡಿಸಲು ಸೂಚನೆ

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಜಾಗ ಕಳೆದುಕೊಂಡಿರುವ ಹಾಗೂ ಪರಿಹಾರಧನ ಪಾವತಿ ಬಾಕಿ ಇರುವವರ ಪಟ್ಟಿಯನ್ನು ಸಿದ್ಧಪಡಿಸಬೇಕು. ಪ್ರತಿಯೊಬ್ಬ ಭೂಮಾಲೀಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಶೃಂಗೇರಿ–ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions