ಮಲ್ಪೆಯಲ್ಲಿ ಬಾವಿ ನಿರ್ಮಾಣದ ವೇಳೆ ಮಣ್ಣು ಕುಸಿದು ಸಿಲುಕಿ, ಕೊಪ್ಪಳ ಮೂಲದ ಯುವ ಕಾರ್ಮಿಕ ರಮೇಶ್ ಮೃತಪಟ್ಟಿರುವ ಘಟನೆ ಅತ್ಯಂತ ದುಃಖಕರ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಉಡುಪಿ ಜಿಲ್ಲಾಧ್ಯಕ್ಷರಾದ ಇದ್ರೀಸ್ ಹೂಡೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಮೃತ ಕಾರ್ಮಿಕನ ಕುಟುಂಬಕ್ಕೆ ಸರ್ಕಾರ ತಕ್ಷಣವೇ 25 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿ ನ್ಯಾಯ ಒದಗಿಸಬೇಕೆಂದು ಪಕ್ಷದ ಪರವಾಗಿ ಅವರು ಆಗ್ರಹಿಸಿದ್ದಾರೆ.
“ವಲಸೆ ಕಾರ್ಮಿಕರೂ ನಮ್ಮಂತೆಯೇ ಮನುಷ್ಯರು. ಅವರಿಗೂ ಘನತೆಯುತ ಮತ್ತು ಸುರಕ್ಷಿತ ಬದುಕಿನ ಸಂಪೂರ್ಣ ಹಕ್ಕಿದೆ. ಆದರೆ ಯಾವುದೇ ವೈಜ್ಞಾನಿಕ ಸುರಕ್ಷತಾ ಕ್ರಮಗಳಿಲ್ಲದೆ, ಅತ್ಯಂತ ಬೇಜವಾಬ್ದಾರಿಯಿಂದ ಕೆಲಸ ಮಾಡಿಸಿರುವುದೇ ಈ ಪ್ರಾಣಹಾನಿಗೆ ನೇರ ಕಾರಣವಾಗಿದೆ. ಸುರಕ್ಷತಾ ನಿರ್ಲಕ್ಷ್ಯದಿಂದ ಯುವ ಜೀವವೊಂದು ಬಲಿಯಾಗಿರುವುದು ವಿಷಾದನೀಯ” ಎಂದು ಹೇಳಿದ್ದಾರೆ.
ವೆಲ್ಫೇರ್ ಪಾರ್ಟಿಯ ಪ್ರಮುಖ ಬೇಡಿಕೆಗಳು:
* ಮೃತ ರಮೇಶ್ ಕುಟುಂಬಕ್ಕೆ ತಕ್ಷಣ 25 ಲಕ್ಷ ರೂ. ಪರಿಹಾರ ಘೋಷಿಸಬೇಕು
* ಮೃತನ ತಾಯಿ ಮತ್ತು ಪತ್ನಿಗೆ ಶಾಶ್ವತ ಪುನರ್ವಸತಿ ಹಾಗೂ ಜೀವನೋಪಾಯ ನೆರವು ಒದಗಿಸಬೇಕು
* ಘಟನೆಯ ಕುರಿತು ಉನ್ನತ ಮಟ್ಟದ, ಪಾರದರ್ಶಕ ತನಿಖೆ ನಡೆಸಬೇಕು
* ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು
* ಬಾವಿ ತೋಡುವ ಕಾರ್ಯಗಳಲ್ಲಿ ಆಧುನಿಕ ಮತ್ತು ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ ಕಡ್ಡಾಯಗೊಳಿಸಬೇಕು
* ಆಮ್ಲಜನಕ ಪರೀಕ್ಷೆ, ಗ್ಯಾಸ್ ಪತ್ತೆ ಸಾಧನ, ಸುರಕ್ಷತಾ ಬೆಲ್ಟ್, ಹೆಲ್ಮೆಟ್ ಸೇರಿದಂತೆ ಎಲ್ಲಾ ಸುರಕ್ಷತಾ ಪರಿಕರಗಳನ್ನು ಕಡ್ಡಾಯಗೊಳಿಸಬೇಕು
* ಸುರಕ್ಷತಾ ಕ್ರಮಗಳಿಲ್ಲದೆ ಕಾರ್ಮಿಕರನ್ನು ಅಪಾಯಕಾರಿ ಬಾವಿಗಳಿಗೆ ಇಳಿಸುವುದನ್ನು ತಕ್ಷಣ ನಿಷೇಧಿಸಬೇಕು
* ಜಿಲ್ಲೆಯಲ್ಲಿ ದುಡಿಯುತ್ತಿರುವ ವಲಸೆ ಕಾರ್ಮಿಕರ ಸುರಕ್ಷತೆ ಕುರಿತು ಕಾರ್ಮಿಕ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು
“ಕಾರ್ಮಿಕರ ಜೀವ ಅಮೂಲ್ಯ — ಸುರಕ್ಷತೆ ಇಲ್ಲದೆ ಕೆಲಸ ಮಾಡಿಸುವುದು ಮಾನವೀಯತೆಯ ವಿರುದ್ಧವಾಗಿದೆ. ಕಡುಬಡತನದಿಂದ ದೂರದ ಊರಿನಿಂದ ಹೊಟ್ಟೆಪಾಡಿಗಾಗಿ ಬಂದು, ರಾಜ್ಯದ ಅಭಿವೃದ್ಧಿಗೆ ತಮ್ಮ ಶ್ರಮ ಅರ್ಪಿಸುವ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿರುವುದು ನಮ್ಮ ಸಾಮಾಜಿಕ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಸಂತ್ರಸ್ತ ಕುಟುಂಬಕ್ಕೆ ಸಂಪೂರ್ಣ ನ್ಯಾಯ ಒದಗಿಸಬೇಕು ಎಂದು Welfare Party of India ಪತ್ರಿಕಾ ಪ್ರಕಟಣೆಯ ಮೂಲಕ ಬಲವಾಗಿ ಒತ್ತಾಯಿಸಿದೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions