ಕುಂದಾಪುರದಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಡದ ಶಂಕುಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ನಡೆಸಿದ ಧರಣಿ ವೇಳೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಮುಖಂಡ ಕೋಟ ನಾಗೇಂದ್ರ ಪುತ್ರನ್ ತೀವ್ರ ವಾಗ್ದಾಳಿ ನಡೆಸಿದರು.
“ಇಂದು ಧರಣಿ ಕುಳಿತಿರುವವರಲ್ಲಿ 85 ಶೇಕಡಾ ಜನರು ಇಂದಿರಾ ಗಾಂಧಿ ನೀಡಿದ ಜಾಗದಲ್ಲೇ ವಾಸವಾಗಿದ್ದಾರೆ. ನಿಮಗೆ ವಾಸಕ್ಕೆ ಜಾಗ ಕೊಟ್ಟದ್ದು ಕಾಂಗ್ರೆಸ್ ಪಕ್ಷ. ಈಗ ಕಾಂಗ್ರೆಸ್ ಕಚೇರಿಗೆ ಸರ್ಕಾರ 11 ಸೆಂಟ್ಸ್ ಜಾಗ ನೀಡಿದರೆ ಏಕೆ ಇಷ್ಟು ಹೊಟ್ಟೆ ಉರಿ?” ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಇದೇ ಶಂಕುಸ್ಥಾಪನೆಗೊಂಡ ಕಾಂಗ್ರೆಸ್ ಕಟ್ಟಡಕ್ಕೆ ಇಂದು ಧರಣಿ ಕುಳಿತವರು ಕೆಲಸಕ್ಕಾಗಿ ಬರಬೇಕಾಗುತ್ತದೆ ಎಂದು ಟೀಕಿಸಿದರು.
ಸಾರ್ವಜನಿಕರಿಗೆ ಉಪಕಾರವಾಗುವ ಯಾವುದೇ ಕಟ್ಟಡವಾಗಲಿ — ಅದು ಕಾಂಗ್ರೆಸ್‌ನದ್ದಾಗಲಿ ಅಥವಾ ಬಿಜೆಪಿಯದ್ದಾಗಲಿ — ಜನರ ಅಭಿವೃದ್ಧಿಯ ದೃಷ್ಟಿಯಿಂದ ಅಗತ್ಯವಿದೆ ಎಂದು ಅವರು ಹೇಳಿದರು. “ಕಾಂಗ್ರೆಸ್ ಕಚೇರಿಯಲ್ಲಿಯೂ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲು ಅವಕಾಶ ಇರುತ್ತದೆ. ಬಿಜೆಪಿ ಕಚೇರಿಯಲ್ಲಿಯೂ ಅದೇ ಅಗತ್ಯವಿದೆ. ಆದರೆ ಬಿಜೆಪಿ ನಾಯಕರು ಸಾರ್ವಜನಿಕರಿಗೆ ಉಪಕಾರ ಮಾಡುವ ಕೆಲಸ ಮಾಡೋದಿಲ್ಲ, ಉಪಕಾರ ಮಾಡುವವರಿಗೂ ಬಿಡೋದಿಲ್ಲ” ಎಂದು ಆರೋಪಿಸಿದರು.
“ಕುಂದಾಪುರ ಬಿಜೆಪಿ ನಾಯಕರ ಬಳಿ ಅಭಿವೃದ್ಧಿಯ ಅಜೆಂಡಾ ಇಲ್ಲ. 30 ವರ್ಷಗಳಿಂದ ವಿಧಾನಸಭೆಯ ಬೆಂಚ್ ಬಿಸಿ ಮಾಡಿದ್ದು ಬಿಟ್ಟರೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಬಡವರ ಮನೆ ಮಕ್ಕಳ ಹಣೆಗೆ ಕೆಮಿಕಲ್ ಕುಂಕುಮ ಹಾಕಿದುದೇ ಅವರ ಸಾಧನೆ” ಎಂದು ಕಿಡಿಕಾರಿದರು.
ಇಂದು ಸಮಾಜದಲ್ಲಿ ಉಳಿದಿರುವ ಸಂಸ್ಕಾರ, ಸಂಸ್ಕೃತಿ, ಹಿಂದುತ್ವ ಹಾಗೂ ಸರ್ವಧರ್ಮ ಸಹೋದರತ್ವವು ಹಿಂದಿನವರು ಹಾಕಿಕೊಟ್ಟ ಮೌಲ್ಯಗಳಿಂದ ಉಳಿದಿದೆ ಹೊರತು “ಗೊಂದಲ ಸೃಷ್ಟಿಸುವ ಡುಪ್ಲಿಕೇಟ್ ಹಿಂದೂಗಳಿಂದ ಅಲ್ಲ” ಎಂದು ಬಿಜೆಪಿ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions