ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸಿರುವ ಕಾಯಿದೆ ಹಾಗೂ ಕಾನೂನುಗಳ ಬಗ್ಗೆ
ಸಾರ್ವಜನಿಕರಲ್ಲಿ ಅರಿವಿದ್ದಾಗ ಮಾತ್ರ ಹಿರಿಯರ ಮೇಲಾಗುವ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ. ಈ ಬಗ್ಗೆ ಜನರಿಗೆ ಹೆಚ್ಚು ಜಾಗೃತಿ
ಮೂಡಿಸುವ ಮೂಲಕ ಹಿರಿಯ ಜೀವಗಳು ತಮ್ಮ ಸಂಧ್ಯಾ ಕಾಲದಲ್ಲಿ ನೆಮ್ಮದಿಯ ಜೀವನ ಜೀವಿಸಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ಪ್ರಧಾನ
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಸಿದ್ದಪ್ಪ ಗಂಗಣ್ಣನವರ್ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ
ಮತ್ತು ಸಬಲೀಕರಣ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ
ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಉಡುಪಿ ಜಿಲ್ಲೆ ಇವರ
ಸಹಯೋಗದೊಂದಿಗೆ ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ -ಪೋಷಣೆ ಮತ್ತು ಕಲ್ಯಾಣ ಅಧಿನಿಯಮ – 2007 ರ ಕುರಿತು ಅಧಿಕಾರಿಗಳಿಗೆ
ಮತ್ತು ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ ಆಯೋಜಿಸಲಾದ ಒಂದು ದಿನದ ಮಾಹಿತಿ
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಧುನಿಕ ಜೀವನ ಶೈಲಿ, ತಂತ್ರಜ್ಞಾನದ ಬೆಳವಣಿಗೆ, ನಗರಿಕರಣ, ವಿಭಕ್ತ ಕುಟುಂಬ ಪದ್ಧತಿ ಸೇರಿದಂತೆ ಮತ್ತಿತರ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ
ಹಿರಿಯ ನಾಗರಿಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಅವರುಗಳ ಪೋಷಣೆ ಮತ್ತು ರಕ್ಷಣೆ ಅತ್ಯವಶ್ಯಕವಾಗಿ ಇದೆ. ಇಂತಹ ಹಿರಿಯ ನಾಗರಿಕರ ರಕ್ಷಣೆಗಾಗಿ
ಪಾಲಕರ ಪೋಷಕರ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2007 ಜಾರಿಗೆ ತರಲಾಗಿದೆ ಎಂದ ಅವರು, ಕಾಯಿದೆಯು ನಿರಾಶ್ರಿತ ಪೋಷಕರ
ಹಾಗೂ ಹಿರಿಯ ನಾಗರಿಕರ ಹಿತರಕ್ಷಣೆ ಕಾಪಾಡುವ ಉದ್ದೇಶ ಹೊಂದಿದೆ ಎಂದರು.
ಮನುಷ್ಯ ತನ್ನ ಜೀವನದಲ್ಲಿ ಬಾಲ್ಯ, ಯೌವ್ವನ ಹಾಗೂ ವೃದ್ಧಾಪ್ಯನಾಗುವವರೆಗೆ ಸಮಾಜದ ಅನೇಕ ಮುಖಗಳನ್ನು ನೋಡಿರುತ್ತಾನೆ. ಸಾಮಾಜಿಕ
ಜೀವನ ಶೈಲಿ, ಸುಖ - ದುಃಖ, ಕಷ್ಟ -ನಷ್ಟ, ಧೈರ್ಯ, ಸಾಮರ್ಥ್ಯ ಸೇರಿದಂತೆ ಬದುಕಿನ ಎಲ್ಲಾ ಹಂತಗಳಲ್ಲಿಯೂ ಸವಾಲಾಗಿ ಸ್ವೀಕರಿಸುವಂತಹ ವಿವೇಕ
ಹಿರಿಯ ಚೇತನರಲ್ಲಿ ಇರುತ್ತದೆ. ನಮ್ಮಗಳ ಬದುಕಿನುದ್ದಕ್ಕೂ ಹಿರಿಯ ನಾಗರಿಕರು ಮಾರ್ಗದರ್ಶಕರಾಗಿ ಇರಲಿದ್ದು, ಅವರುಗಳು ಗೌರವಯುತ ಜೀವನ
ನಡೆಸುವಂತಾಗಬೇಕು ಎಂದರು.
ಹಿರಿಯ ನಾಗರಿಕರ ಮೇಲಾಗುವ ನಿರ್ಲಕ್ಷ್ಯತನ ಹಾಗೂ ದೌರ್ಜನ್ಯ ತಡೆಗಟ್ಟಲು ಕಾಯಿದೆಗಳು ಸಹಕರಿಯಾಗಲಿದೆ. ಅಧಿಕಾರಿಗಳು ಹಾಗೂ ಹಿರಿಯ
ನಾಗರಿಕರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು ಕಾರ್ಯಾಗಾರದ ಆಯಾಮಗಳನ್ನು ತಿಳಿದುಕೊಂಡು ತಮ್ಮ ತಳಮಟ್ಟದಲ್ಲಿ
ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಈ ಸಂದರ್ಭದಲ್ಲಿ ಕಾನೂನಿನ ಅರಿವು ಮೂಡಿಸುವುದು ಮಾತ್ರವಲ್ಲದೆ ಮಾನವೀಯ ಹಾಗೂ
ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಅತೀ ಮುಖ್ಯವಾಗಿರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಮಕ್ಕಳನ್ನು ಚಿಕ್ಕಂದಿನಿAದ ಪ್ರೀತಿ ಕಾಳಜಿಯಿಂದ ಬೆಳೆಸಿ,
ಜೀವನ ರೂಪಿಸಿಕೊಳ್ಳಲು ಸಾಕಷ್ಟು ಏರಿಳಿತಗಳನ್ನು ಅನುಭವಿಸಿರುವ ಹಿರಿಯ ನಾಗರಿಕರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಯಾವುದೇ
ಕಾಯಿದೆಗಳನ್ನು ಅನುಷ್ಠಾನ ಮಾಡುವಾಗ ಕಾನೂನಿನೊಂದಿಗೆ ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಹಿರಿಯ ನಾಗರಿಕರ ಬದುಕಿಗೆ
ಆಸರೆಯಾಗಲಿದೆ ಎಂದ ಅವರು ಈ ಕಾಯಿದೆಗಳ ಬಗ್ಗೆ ವಿಶೇಷವಾಗಿ ಮಕ್ಕಳಲ್ಲಿಯೂ ಅರಿವು ಮೂಡಿಸಬೇಕಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರೇಮಮೂರ್ತಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕ ಜೀವನ
ಶೈಲಿಯಿಂದಾಗಿ ಪ್ರಸ್ತುತ ಹಿರಿಯ ನಾಗರಿಕರ ಸಂಖ್ಯೆಯೊAದಿಗೆ ಅವರುಗಳನ್ನು ನೋಡಿಕೊಳ್ಳುತ್ತಿರುವ ವೃದ್ಧಾಶ್ರಮಗಳು, ಹಿರಿಯ ನಾಗರಿಕರ ಆಶ್ರಯ
ಕೇಂದ್ರಗಳ ಸಂಖ್ಯೆಯೂ ಹೆಚ್ಚಾಗುತ್ತಿರುವುದು ವಿಷಾಧನೀಯ ಸಂಗತಿ. ಜೀವನದ ಅಪಾರ ಅನುಭವವುಳ್ಳ ಹಿರಿಯ ನಾಗರಿಕರ ಮಾರ್ಗದರ್ಶನ ನಮ್ಮೆಲ್ಲರ
ಬದುಕಿಗೆ ದಾರಿದೀಪವಾಗಲಿದೆ ಎಂದ ಅವರು, ಹಿರಿಯ ನಾಗರಿಕರಿಗೆ ಸಮಾಜದಲ್ಲಿ ಆರ್ಥಿಕ ಭದ್ರತೆ ಒದಗಿಸಲು, ಅರೋಗ್ಯ ರಕ್ಷಣೆ, ಸಾಮಾಜಿಕ
ಒಳಗೊಳ್ಳುವಿಕೆ ಕುರಿತು ಅವರುಗಳಿಗೆ ಹಾಗೂ ಸಾರ್ವಜನಿಕರಿಗೆ ಕಾಯಿದೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್ ಯಶ್ವಂತ್ ರಾವ್ ಕಾನೂನು ಅನುಷ್ಠಾನದಲ್ಲಿ ನೈತಿಕ
ಮೌಲ್ಯಗಳು ಮತ್ತು ಸಾಮಾಜಿಕ ಪರಿಣಾಮಗಳ ಕುರಿತು, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ಅವರು
ಪ್ರಕರಣ ಅಧ್ಯಯನ – ಜಿಲ್ಲೆಯಲ್ಲಿ ವರದಿಯಾದ ಪ್ರಮುಖ ಪ್ರಕರಣಗಳ ವಿಶ್ಲೇಷಣೆ ಮುಂತಾದ ವಿಷಯಗಳ ಬಗ್ಗೆ ಮಂಡನೆ ಮತ್ತು ಚರ್ಚೆ,
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಅಧಿಕಾರಿ ಎಂ ನಿರಂಜನ್ ಭಟ್ ಅವರು ಎಂ.ಡಬ್ಲೂö್ಯಪಿ.ಎಸ್ ಆಕ್ಟ್ -
2007 ರ ಉದ್ದೇಶ ಹಾಗೂ ನಿರ್ವಹಣೆ, ನ್ಯಾಯ ಮಂಡಳಿಯ ಪ್ರಕ್ರಿಯೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಹಿರಿಯ ನಾಗರಿಕರು ತಮ್ಮ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಂವಾದ ನಡೆಸುವುದರೊಂದಿಗೆ ಸಮಸ್ಯೆಗಳಿಗೆ ಪರಿಹಾರ
ಕಂಡುಕೊAಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು,
ಹಿರಿಯ ನಾಗರಿಕರ ವೇದಿಕೆ ಜಿಲ್ಲಾ ಹಾಗೂ ತಾಲೂಕು ಒಕ್ಕೂಟದ ಪದಾಧಿಕಾರಿಗಳು, ವೃದ್ಧಾಶ್ರಮಗಳ ಮುಖ್ಯಸ್ಥರು ಹಾಗೂ ಮತ್ತಿತರರು
ಉಪಸ್ಥಿತರಿದ್ದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ ಸ್ವಾಗತಿಸಿ, ರೆಡ್‌ಕ್ರಾಸ್ ಗೌರವ ಕಾರ್ಯದರ್ಶಿ ಗಣನಾಥ ಶೆಟ್ಟಿ ಎಕ್ಕಾರು ನಿರೂಪಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions