ಉಡುಪಿ ಸಮೀಪದ ಕೆಮ್ಮಣ್ಣಿನ ಲಿಟ್ಸ್ ಫ್ಲವರ್ ಹಾಲ್ ಇದೀಗ ಹಲಸಿನ ಘಮಘಮ ಸುವಾಸನೆಯಿಂದ ಕಂಗೊಳಿಸುತ್ತಿದೆ. ಮೇ 8ರಿಂದ 10ರವರೆಗೆ ನಡೆಯಲಿರುವ ವಿಶೇಷ ಹಲಸು ಮತ್ತು ಹಣ್ಣು ಮೇಳಕ್ಕೆ ಭರ್ಜರಿ ಚಾಲನೆ ದೊರೆತಿದ್ದು, ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಮೇಳದಲ್ಲಿ ವಿವಿಧ ತಳಿಯ ಹಲಸುಗಳು ಜನರ ಗಮನ ಸೆಳೆಯುತ್ತಿವೆ. ಅದರಲ್ಲೂ ಚಂದ್ರ ಹಲಸು, ಕೇಸರ್ ಹಲಸು, ಏಕದಶಿ ಹಾಗೂ ರುದ್ರಾಕ್ಷಿ ತಳಿಯ ಹಲಸುಗಳು ವಿಶೇಷ ಆಕರ್ಷಣೆಯಾಗಿವೆ. ಆಂಧ್ರಪ್ರದೇಶದಿಂದ ತರಿಸಲಾದ ಗುಣಮಟ್ಟದ ಹಲಸಿನ ಹಣ್ಣುಗಳು ಖರೀದಿದಾರರನ್ನು ಸೆಳೆಯುತ್ತಿದ್ದು, ಹಲಸಿನ ಸಿಹಿ ರುಚಿ ಹಾಗೂ ಸುವಾಸನೆ ಮೇಳದ ಪ್ರಮುಖ ವಿಶೇಷತೆಯಾಗಿದೆ.
ಹಲಸಿನ ಹಣ್ಣಿನಷ್ಟೇ ಅಲ್ಲದೆ, ಹಲಸಿನಿಂದ ತಯಾರಿಸಲಾದ ವಿವಿಧ ಖಾದ್ಯಗಳು ಕೂಡ ಮೇಳಕ್ಕೆ ಬರುವವರ ಬಾಯಲ್ಲಿ ನೀರೂರಿಸುತ್ತಿವೆ. ಹಲಸಿನ ಸಂಡಿಗೆ, ಹಪ್ಪಳ, ದೋಸೆ, ಹೋಳಿಗೆ, ಜಿಲೇಬಿ ಸೇರಿದಂತೆ ಹಲಸಿನ ವಿಶೇಷ ಉತ್ಪನ್ನಗಳು ಆಹಾರಪ್ರಿಯರ ಮೆಚ್ಚುಗೆ ಪಡೆಯುತ್ತಿವೆ.

31ಕ್ಕೂ ಅಧಿಕ ಸ್ಟಾಲ್‌ಗಳನ್ನು ಹೊಂದಿರುವ ಮೇಳದಲ್ಲಿ ವಿವಿಧ ತಳಿಯ ಮಾವಿನಹಣ್ಣುಗಳು, ಫ್ಯಾನ್ಸಿ ವಸ್ತುಗಳು, ಬಟ್ಟೆಗಳು ಹಾಗೂ ಇನ್ನಿತರ ಗೃಹೋಪಯೋಗಿ ಉತ್ಪನ್ನಗಳ ಮಾರಾಟವೂ ನಡೆಯುತ್ತಿದೆ. ಕುಟುಂಬ ಸಮೇತರಾಗಿ ಆಗಮಿಸುವ ಸಾರ್ವಜನಿಕರಿಗೆ ಮೇಳ ಮನರಂಜನೆಯ ಜೊತೆಗೆ ಖರೀದಿ ಮೇಳವಾಗಿಯೂ ಪರಿಣಮಿಸಿದೆ.

ಮಕ್ಕಳಿಗಾಗಿ ಪ್ರತಿದಿನ ಸಂಜೆ ವಿವಿಧ ಮನರಂಜನಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿದ್ದು, ಮಕ್ಕಳ ಕಿಲಕಿಲ ನಗುವಿನಿಂದ ಮೇಳದ ವಾತಾವರಣ ಮತ್ತಷ್ಟು ಸಂಭ್ರಮದಿಂದ ಕಂಗೊಳಿಸುತ್ತಿದೆ.

“ಸ್ಥಳೀಯ ಜನರಿಗೆ ನೈಸರ್ಗಿಕ ಹಣ್ಣುಗಳ ಪರಿಚಯ ಮತ್ತು ರೈತರ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ” ಎಂದು ಮೇಳದ ಆಯೋಜಕ ಮುಹಮ್ಮದ್ ಮುಕ್ತಾರ್ ಹುಸೇನ್ ತಿಳಿಸಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions