ಕುಂದಾಪುರ ತಾಲೂಕಿನ ಯಡಾಡಿ-ಮತ್ಯಾಡಿ ಸಮೀಪದ ಗುಡ್ಡೆಯಂಗಡಿಯಲ್ಲಿ ಡಾ. ಜಿ. ರಾಮಕೃಷ್ಣ ಆಚಾರ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ವತಿಯಿಂದ ನಿರ್ಮಾಣಗೊಂಡಿರುವ ನೂತನ SKF ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್‌ನ ಉದ್ಘಾಟನಾ ಸಮಾರಂಭವು ಭಾನುವಾರ ಸಂಸ್ಥೆಯ ಕ್ಯಾಂಪಸ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಮೂಡಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉದ್ಘಾಟಿಸಿ ಮಾತನಾಡಿ, “ನಾನು ಮತ್ತು ಡಾ. ಜಿ. ರಾಮಕೃಷ್ಣ ಆಚಾರ್ ಇಬ್ಬರೂ ಜೀವನದಲ್ಲಿ ಅಪಾರ ಕಷ್ಟಗಳನ್ನು ಎದುರಿಸಿ ಮೇಲೆ ಬಂದವರು. ಇಂದು ಅವರು ತಮ್ಮ ಸಂಸ್ಥೆಗಳ ಮೂಲಕ ದೇಶ-ವಿದೇಶಗಳಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ. ಇದೀಗ ಹುಟ್ಟೂರಿನ ಯುವಕರಿಗೆ ಕೌಶಲಾಧಾರಿತ ಶಿಕ್ಷಣ ನೀಡಿ ಉದ್ಯೋಗ ನೀಡಲು ಮುಂದಾಗಿರುವುದು ಶ್ಲಾಘನೀಯ ಕಾರ್ಯ” ಎಂದರು.

“ಸುಮಾರು 23 ದೇಶಗಳಲ್ಲಿ ಸಂಸ್ಥೆಯನ್ನು ಬೆಳೆಸಿರುವ ಡಾ. ರಾಮಕೃಷ್ಣ ಆಚಾರ್ ಇದೀಗ ತಮ್ಮ ಊರಿನ ಯುವಕರಿಗೆ ಉಚಿತ ತರಬೇತಿ ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಡಲು ಮುಂದಾಗಿದ್ದಾರೆ. ಹುಟ್ಟೂರಿಗೆ ಇದಕ್ಕಿಂತ ದೊಡ್ಡ ಕೊಡುಗೆ ಮತ್ತೊಂದಿಲ್ಲ” ಎಂದು ಅವರು ಹೇಳಿದರು.


ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ. ಲಿ. ಚೇರ್ಮನ್ ಹಾಗೂ ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಜಿ. ರಾಮಕೃಷ್ಣ ಆಚಾರ್ ಮಾತನಾಡಿ, “ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫೇಲಾದ ಮಕ್ಕಳಿಗೂ ಇಲ್ಲಿ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲಾಗುವುದು. ನಾನು ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದವನಾಗಿದ್ದರಿಂದ ಯುವಕರಿಗೆ ನೆರವಾಗುವ ಉದ್ದೇಶದಿಂದ ಈ ಸಂಸ್ಥೆ ಆರಂಭಿಸಲಾಗಿದೆ” ಎಂದರು.
“ಇಲ್ಲಿ ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಉಚಿತ ತರಬೇತಿ ನೀಡಲಾಗುವುದು. ತರಬೇತಿ ಪೂರ್ಣಗೊಳಿಸಿದವರಿಗೆ ನಮ್ಮದೇ ಸಂಸ್ಥೆಯಲ್ಲಿ ಉದ್ಯೋಗ ಕಲ್ಪಿಸುವ ವ್ಯವಸ್ಥೆಯೂ ಇದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಚೇರಿ ವಿಭಾಗವನ್ನು ಉದ್ಘಾಟಿಸಿದರು.
ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗವನ್ನು ಉದ್ಯಮಿ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ, ಕಂಪ್ಯೂಟರ್ ವಿಭಾಗವನ್ನು ಕಾರ್ಕಳ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಚೇರ್ಮನ್ ಡಾ. ಸುಧಾಕರ್ ಶೆಟ್ಟಿ, ಫ್ಯಾಶನ್ ಡಿಸೈನಿಂಗ್ ವಿಭಾಗವನ್ನು ಮಂಗಳೂರಿನ ಲೆಕ್ಕ ಪರಿಶೋಧಕ ಸಿಎ ಎಸ್.ಎಸ್. ನಾಯಕ್ ಉದ್ಘಾಟಿಸಿದರು.
ತರಗತಿ ಕೊಠಡಿಗಳನ್ನು ಮೊಳಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಎಂಆರ್ ಎಸಿ ಹಾಗೂ ಪ್ಲಂಬಿಂಗ್ ವಿಭಾಗವನ್ನು ಪ್ರಥಮ ದರ್ಜೆ ಗುತ್ತಿಗೆದಾರ ಬಿ. ಅರುಣ್ ಕುಮಾರ್ ಹೆಗ್ಡೆ ಹಾಗೂ ಫಿಟ್ಟಿಂಗ್ ಮತ್ತು ವೆಲ್ಡಿಂಗ್ ವಿಭಾಗವನ್ನು ಸುಜ್ಞಾನ ಎಜುಕೇಶನ್ ಟ್ರಸ್ಟ್ ಚೇರ್ಮನ್ ಡಾ. ರಮೇಶ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉದ್ಯಮಿ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ, ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಚೇರ್ಮನ್ ಡಾ. ಸುಧಾಕರ್ ಶೆಟ್ಟಿ, ಮಂಗಳೂರಿನ ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್, ಯಡಾಡಿ-ಮತ್ಯಾಡಿಯ ಪ್ರಥಮ ದರ್ಜೆ ಗುತ್ತಿಗೆದಾರ ಬಿ. ಅರುಣ್ ಕುಮಾರ್ ಹೆಗ್ಡೆ, ಮೊಳಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಹಾಗೂ ಸುಜ್ಞಾನ ಎಜುಕೇಶನ್ ಟ್ರಸ್ಟ್ ಕುಂದಾಪುರದ ಚೇರ್ಮನ್ ಡಾ. ರಮೇಶ್ ಶೆಟ್ಟಿ, ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಪ್ರಜ್ವಲ್ ಆರ್. ಆಚಾರ್, ತೇಜಸ್ ಆರ್. ಆಚಾರ್ ಹಾಗೂ ರಕ್ಷತ್ ಆರ್. ಆಚಾರ್ ಉಪಸ್ಥಿತರಿದ್ದರು.
ಸುಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಂತ್ರಿಕ ಸಲಹೆಗಾರ ಎ. ಬಾಲಕೃಷ್ಣ ಅಧ್ಯಯನ ವಿಭಾಗವನ್ನು ಹಾಗೂ ಶ್ರೀವಿದ್ಯಾ ಫ್ಯಾಶನ್ ಡಿಸೈನ್ ವಿಭಾಗವನ್ನು ಪರಿಚಯಿಸಿದರು.

ಪ್ರಜ್ವಲ್ ಆರ್. ಆಚಾರ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ವಾಗ್ನಿ ದಾಮೋದರ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರೆ, ತೇಜಸ್ ಆರ್. ಆಚಾರ್ ಧನ್ಯವಾದ ಸಮರ್ಪಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions