ಇಂದಿನ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ‘ಸನ್ಮಾನ’ ಎನ್ನುವುದು ಒಂದು ಅನಿವಾರ್ಯ ಆಚರಣೆಯಾಗಿಬಿಟ್ಟಿದೆ. ಆದರೆ ಈ ಆಚರಣೆ ಈಗ ತನ್ನ ಮೂಲ ಸತ್ವವನ್ನೇ ಕಳೆದುಕೊಂಡು, ಕೇವಲ ಪ್ರದರ್ಶನದ ವಸ್ತುವಾಗಿರುವುದು ವಿಷಾದನೀಯ. ಅರ್ಹತೆಗಿಂತ ಹೆಚ್ಚಾಗಿ ಪ್ರಭಾವ, ಪ್ರಚಾರ ಮತ್ತು ಹಣವೇ ಸನ್ಮಾನದ ಹೊಸ ಮಾನದಂಡಗಳಾಗಿವೆ.
ಸಮಾಜಕ್ಕೆ ಕಿಂಚಿತ್ತೂ ಕೊಡುಗೆ ನೀಡದ ಅಥವಾ ಕೇವಲ ಪ್ರಭಾವ ಹೊಂದಿರುವ ವ್ಯಕ್ತಿಗಳಿಗೆ ಇಂದು ಸಾಲು ಸಾಲು ಸನ್ಮಾನಗಳು ದೊರೆಯುತ್ತಿವೆ. "ನೀನು ನನಗೆ ಹಾರ ಹಾಕು, ನಾನು ನಿನಗೆ ಶಾಲು ಹೊದಿಸುತ್ತೇನೆ" ಎಂಬ ಪರಸ್ಪರ ಒಪ್ಪಂದದ ಮೇಲೆ ನಡೆಯುವ ಈ ಪ್ರಕ್ರಿಯೆಯಲ್ಲಿ ನಿಜವಾದ ಸಾಧಕರು ತೆರೆಯ ಮರೆಗೆ ಸರಿಯುತ್ತಿದ್ದಾರೆ. ಅರ್ಹತೆ ಇಲ್ಲದವನಿಗೆ ನೀಡುವ ಸನ್ಮಾನವು ಸಮಾಜದ ನೈತಿಕತೆಯನ್ನು ಕುಸಿಯುವಂತೆ ಮಾಡುತ್ತದೆ ಮತ್ತು ಪ್ರಾಮಾಣಿಕ ಕೆಲಸಗಾರರಲ್ಲಿ ನಿರುತ್ಸಾಹ ಮೂಡಿಸುತ್ತದೆ.
ಸನ್ಮಾನ ಪತ್ರಗಳಲ್ಲಿ ವ್ಯಕ್ತಿಯಲ್ಲಿ ಇಲ್ಲದ ಗುಣಗಳನ್ನು ವೈಭವೀಕರಿಸುವುದು ದೊಡ್ಡ ಪಿಡುಗಾಗಿದೆ. ಸಾಮಾನ್ಯ ಕಾರ್ಯವನ್ನೂ ಅಪ್ರತಿಮ ಸಾಧನೆಯಂತೆ ಬಿಂಬಿಸಿ ಅಟ್ಟಕ್ಕೇರಿಸುವ ಈ ಪರಿಪಾಠವು ವ್ಯಕ್ತಿಯನ್ನು ವಾಸ್ತವದಿಂದ ದೂರ ಮಾಡುತ್ತದೆ. ಹೊಗಳಿಕೆಯ ಅತಿಯಾದ ಅಮಲೇರಿಸಿ ವ್ಯಕ್ತಿಯನ್ನು ಅಹಂಕಾರದ ಗೂಡಾಗಿಸುವುದು ಈ ಸನ್ಮಾನಗಳ ಮೊದಲ ದುಷ್ಪರಿಣಾಮ. ಇದು ಇದ್ದ ನಿಷ್ಕಳಂಕ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿ, ಅವರ ನೈಜ ಘನತೆಯನ್ನು ಕಡಿಮೆ ಮಾಡುತ್ತದೆ.
ಸನ್ಮಾನ ಎಂಬುದು ಒಮ್ಮೆ ಸಿಗುವ ಪ್ರೋತ್ಸಾಹವಾಗುವ ಬದಲು, ಇಂದು ಅನೇಕರಿಗೆ ಅದೊಂದು 'ಚಟ'ವಾಗಿ ಪರಿಣಮಿಸಿದೆ. ಒಮ್ಮೆ ವೇದಿಕೆಯ ಮೇಲೆ ಹಾರ-ತುರಾಯಿಗಳ ವೈಭವವನ್ನು ಅನುಭವಿಸಿದ ವ್ಯಕ್ತಿಗಳಿಗೆ, ಮುಂದಿನ ಪ್ರತಿ ಕಾರ್ಯಕ್ರಮದಲ್ಲೂ ಅದೇ ರೀತಿಯ ಮನ್ನಣೆ ಸಿಗದಿದ್ದರೆ ಅವರು ಅನುಭವಿಸುವ ಮಾನಸಿಕ ಅವಸ್ಥೆ ವರ್ಣನಾತೀತ. ಎರಡನೇ ಬಾರಿ ಸನ್ಮಾನಕ್ಕೆ ಕರೆಯದಿದ್ದರೆ ಸಂಘಟಕರ ಮೇಲೆ ಮುನಿಸಿಕೊಳ್ಳುವುದು ಅಥವಾ ತಾವೇ ಹಣ ನೀಡಿ ಸನ್ಮಾನವನ್ನು 'ಖರೀದಿಸುವ' ಹಂತಕ್ಕೆ ಇಂದಿನ 'ಗೌರವದ ಹಸಿವು' ತಲುಪಿದೆ. ಸನ್ಮಾನ ಸಿಗದಿದ್ದಾಗ ಅವರ ಮುಖದಲ್ಲಿ ಕಾಣುವ ಅಸಹನೆ, ಅವರು ಮಾಡಿದ ಸಾಧನೆಗಿಂತಲೂ ಅವರ ಅಹಂಕಾರವೇ ದೊಡ್ಡದಾಗಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ.
ಅನೇಕ ಸನ್ಮಾನಗಳು ಇಂದು ವೇದಿಕೆಯ ಹಿಂದೆ ನಡೆಯುವ ಲಾಬಿಗಳ ಫಲಿತಾಂಶ. ಪ್ರಶಸ್ತಿಗಾಗಿ ಅರ್ಜಿ ಗುಜರಾಯಿಸುವುದು, ಪ್ರಭಾವಿ ವ್ಯಕ್ತಿಗಳಿಂದ ಶಿಫಾರಸು ಮಾಡಿಸುವುದು ಅಥವಾ ಸಂಘಟನೆಗಳಿಗೆ ದೇಣಿಗೆ ನೀಡಿ ಸನ್ಮಾನ ಗಿಟ್ಟಿಸಿಕೊಳ್ಳುವುದು ಇಂದಿನ ಸಂಸ್ಕೃತಿಯಾಗಿದೆ. ಇದು ನೈಜ ಸೇವಾ ಮನೋಭಾವನೆಯನ್ನು ಕೊಂದು, 'ಸನ್ಮಾನಕ್ಕಾಗಿ ಸೇವೆ' ಎಂಬ ವಿಕೃತ ಮನಸ್ಥಿತಿಯನ್ನು ಹುಟ್ಟುಹಾಕುತ್ತಿದೆ. ಸನ್ಮಾನ ಎಂಬುದು ಸಾಧನೆಯ ಫಲವಾಗುವ ಬದಲು ವ್ಯವಹಾರದ ಸರಕಾಗಿ ಬದಲಾಗಿದೆ.
ವೇದಿಕೆಯ ಮೇಲೆ ಗಂಟೆಗಟ್ಟಲೆ ನಡೆಯುವ ಹತ್ತಾರು ಜನರ ಅನಗತ್ಯ ಸನ್ಮಾನಗಳು ಕಾರ್ಯಕ್ರಮದ ಘನತೆಯನ್ನು ಕುಗ್ಗಿಸುತ್ತವೆ. ಒಬ್ಬನೇ ವ್ಯಕ್ತಿ ಪ್ರತಿ ವೇದಿಕೆಯಲ್ಲೂ ಪದೇ ಪದೇ ಸನ್ಮಾನಿಸಲ್ಪಡುವುದು ಪ್ರೇಕ್ಷಕರಲ್ಲಿ ಜಿಗುಪ್ಸೆ ಮೂಡಿಸುತ್ತದೆ. ಮುಖ್ಯ ವಿಷಯಗಳು ಮತ್ತು ಉಪಯುಕ್ತ ಚರ್ಚೆಗಳು ಸನ್ಮಾನದ ಅಬ್ಬರದಲ್ಲಿ ಮೂಲೆಗೆ ಸರಿಯುತ್ತವೆ. ಇದು ಕೇವಲ ಸಮಯದ ವ್ಯರ್ಥವಲ್ಲ, ಸಾರ್ವಜನಿಕರ ಬೌದ್ಧಿಕ ಶಕ್ತಿಯ ಅಪಮಾನವೂ ಹೌದು.
ಧರ್ಮ ಮತ್ತು ಸಂಸ್ಕೃತಿಯ ಪ್ರಕಾರ ಸನ್ಮಾನವೆಂದರೆ ಅದು ಸಾಧನೆಯ ಬೆನ್ನಿಗೆ ತಟ್ಟುವ ಪ್ರೋತ್ಸಾಹದ ಕೈಯಾಗಬೇಕೇ ಹೊರತು, ವ್ಯಕ್ತಿಯನ್ನು ಅಹಂಕಾರದ ಶಿಖರಕ್ಕೇರಿಸುವ ಅಸ್ತ್ರವಾಗಬಾರದು. "ಮಾಡುವ ಕೆಲಸ ದೇವರಿಗೆ ಪ್ರೀತಿಯಾಗಲಿ" ಎಂಬ ತತ್ವ ಮರೆತು, "ಮಾಡುವ ಕೆಲಸ ನಾಲ್ವರಿಗೆ ತಿಳಿಯಲಿ, ಹತ್ತು ಕಡೆ ಸನ್ಮಾನ ಸಿಗಲಿ" ಎಂಬ ಪ್ರಚಾರ ಪ್ರಿಯತೆ ಇಂದಿನ ದೊಡ್ಡ ದುರಂತ.
ಅನರ್ಹರಿಗೆ ನೀಡುವ ಗೌರವವು ಅಂತಿಮವಾಗಿ ಗೌರವಕ್ಕೇ ಮಾಡುವ ಅವಮಾನ. ಸಮಾಜವು ಹಾರ-ತುರಾಯಿಗಳಿಗಿಂತ ಹೆಚ್ಚಾಗಿ, ವ್ಯಕ್ತಿಯ ಗುಣ ಮತ್ತು ನೈಜ ಆದರ್ಶಗಳನ್ನು ಗುರುತಿಸುವತ್ತ ಗಮನ ಹರಿಸಬೇಕಿದೆ. ಸನ್ಮಾನವು ಸಾಧಕನನ್ನು ವಿನಮ್ರಗೊಳಿಸಬೇಕೇ ಹೊರತು ವಿಕಾರಗೊಳಿಸಬಾರದು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions