Advertisement

ಗೋಳಿಕಟ್ಟೆ ಅಲ್-ಫಲಾಹ್ ಮಸೀದಿ ಉದ್ಘಾಟನೆ: ಫ್ರ್ಯಾಂಕಿ ಡಿಸೋಜಗೆ ಭವ್ಯ ನಾಗರಿಕ ಸನ್ಮಾನ

ಹಾವಂಜೆ ಗ್ರಾಮದ ಗೋಳಿಕಟ್ಟೆಯ ಇತಿಹಾಸ ಪ್ರಸಿದ್ಧ ಅಲ್-ಫಲಾಹ್ ಜುಮ್ಮಾ ಮಸೀದಿಯ ನೂತನ ಸುಸಜ್ಜಿತ ಕಟ್ಟಡದ ಉದ್ಘಾಟನಾ ಸಮಾರಂಭ, ಸಾರ್ವಜನಿಕ ಮಸೀದಿ ಸಂದರ್ಶನ ಹಾಗೂ ಸರ್ವಧರ್ಮ ಸೌಹಾರ್ದ ಸಂಗಮ ಕಾರ್ಯಕ್ರಮ ನವೆಂಬರ್ 4ರಂದು ಬುಧವಾರ ಭಕ್ತಿ, ಸಂಭ್ರಮ ಮತ್ತು ಭಾವೈಕ್ಯತೆಯ ವಾತಾವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರಿಗೆ ಭವ್ಯ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ತುಳುನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಯೊಂದಿಗೆ ಬಡವರು, ಶೋಷಿತರು ಹಾಗೂ ಸಮಾಜದ ವಿವಿಧ ವರ್ಗಗಳ ಪರವಾಗಿ ನಿರಂತರವಾಗಿ ಧ್ವನಿಯಾಗುತ್ತಿರುವ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಗೌರವ ಸಲ್ಲಿಸಲಾಯಿತು.

ಶ್ರೀ ಕ್ಷೇತ್ರ ಕೇಮಾರು ಮಠದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ, ವಂ. ಫಾದರ್ ಡೆನಿಸ್ ಅಲೆಕ್ಸಾಂಡರ್ ಡೆಸ್, ಡಾ. ಅಬ್ದುಲ್ ರಶೀದ್ ಹಾಗೂ ಮಾಜಿ ಸಚಿವ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಮಾಜದಲ್ಲಿ ಜಾತಿ, ಧರ್ಮದ ಭೇದ ಮರೆತು ಸೌಹಾರ್ದತೆ, ಶಾಂತಿ, ಪ್ರೀತಿ, ವಿಶ್ವಾಸ ಮತ್ತು ಸೋದರತ್ವವನ್ನು ಬೆಸೆಯುವಲ್ಲಿ ತೊಡಗಿಸಿಕೊಂಡಿರುವ ಫ್ರ್ಯಾಂಕಿ ಡಿಸೋಜ ಅವರ ನಿಸ್ವಾರ್ಥ ಸಾಮಾಜಿಕ ಹಾಗೂ ಮಾನವೀಯ ಸೇವೆಯನ್ನು ಗುರುತಿಸಿ ಅಲ್-ಫಲಾಹ್ ಜುಮ್ಮಾ ಮಸೀದಿ ಆಡಳಿತ ಸಮಿತಿ, ಅಲ್-ಫಲಾಹ್ ಯಂಗ್ ಮೆನ್ಸ್ ಅಸೋಸಿಯೇಷನ್, ಹಿದಾಯತುಲ್ ದಫ್ ಕಮಿಟಿ ಹಾಗೂ ಸ್ವಲಾತ್ ಕಮಿಟಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ, ಶಿಕ್ಷಣ ಸೇವೆಯ ಮೂಲಕ ಪ್ರಸಿದ್ಧರಾದ ಹರೇಕಳ ಹಾಜಬ್ಬ ಹಾಗೂ ಮಾನವೀಯ ಸೇವೆಗಾಗಿ ಗುರುತಿಸಿಕೊಂಡಿರುವ ರವಿ ಕಟಪಾಡಿ ಅವರಿಗೂ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ಇದರೊಂದಿಗೆ ಹಲವು ಗಣ್ಯರು, ದಾನಿಗಳು ಹಾಗೂ ಸಮಾಜಸೇವಕರನ್ನು ಸನ್ಮಾನಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಸಮಾಜದಲ್ಲಿ ಸಾಮರಸ್ಯ, ಪ್ರೀತಿ, ವಿಶ್ವಾಸ ಹಾಗೂ ಸೋದರತ್ವ ಬೆಳೆದು ಶಾಂತಿ ನೆಲೆಸಬೇಕು ಎಂದು ಆಶಿಸಿದರು. ತಮಗೆ ಸಂದಿರುವ ಈ ಸನ್ಮಾನ ವೈಯಕ್ತಿಕ ಗೌರವವಲ್ಲ; ಬದಲಾಗಿ ತುಳುನಾಡ ರಕ್ಷಣಾ ವೇದಿಕೆಯ ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತನಿಗೂ ಸಲ್ಲುವ ಗೌರವವಾಗಿದೆ. ತಮ್ಮ ಮೇಲಿಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಸದಾ ಚಿರಋಣಿಯಾಗಿರುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಮಸೀದಿಯ ಅಧ್ಯಕ್ಷರು, ಪದಾಧಿಕಾರಿಗಳು, ಗೋಳಿಕಟ್ಟೆಯ ಸದಸ್ಯರು, ವಿವಿಧ ಧರ್ಮಗಳ ಧರ್ಮಗುರುಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು. ಸರ್ವಧರ್ಮ ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂದೇಶ ಸಾರಿದ ಕಾರ್ಯಕ್ರಮವು ಸಂಭ್ರಮದಿಂದ ಸಂಪನ್ನಗೊಂಡಿತು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions