ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದೆ, ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ನೀಟ್ ಹಗರಣ ಹಾಗೂ ಜುಲೈ 20ರಂದು ಹೊಸದಿಲ್ಲಿಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯಕ್ಕೆ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಉಡುಪಿ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಬುನಾದಿಯೇ ಚರ್ಚೆ ಮತ್ತು ಸಂವಾದ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಮಹತ್ವದ ವಿಷಯದ ಕುರಿತು ಮುಕ್ತ ಸಂವಾದ ನಡೆಯುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಏಕಮುಖ ಸಂವಹನಕ್ಕೆ ಸೀಮಿತವಾಗಿದ್ದು, ಕಳೆದ ಆರು ವಾರಗಳಿಂದ ದೇಶದಲ್ಲಿ ನಡೆದಿರುವ ಹಲವು ಬೆಳವಣಿಗೆಗಳ ಕುರಿತು ಸರ್ಕಾರ ಚರ್ಚೆಗೆ ಮುಂದಾಗದಿರುವುದೇ ಸಮಸ್ಯೆಗಳ ಮೂಲ ಕಾರಣವಾಗಿದೆ ಎಂದು ಟೀಕಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ಕುರಿತು ವಿದ್ಯಾರ್ಥಿಗಳು ಪ್ರಧಾನಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚೆಗೆ ಅವಕಾಶ ಕೋರೆದರೂ ಸರ್ಕಾರ ಅದಕ್ಕೆ ಸ್ಪಂದಿಸಿಲ್ಲ. ದೇಶದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದರೂ, ಅವರ ಬೇಡಿಕೆಗಳಿಗೆ ಸರ್ಕಾರ ಕಿವಿಗೊಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ನಡೆಸಿದ ಪ್ರತಿಭಟನೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಸಂಸತ್ ಕಡೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿ ಪೊಲೀಸ್ ದೌರ್ಜನ್ಯ ಎಸಗಿರುವುದು ಖಂಡನೀಯ ಎಂದು ಭಂಡಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯಕುಮಾರ್ ಶೆಟ್ಟಿ ಮುನಿಯಾಲು, ಜ್ಯೋತಿ ಹೆಬ್ಬಾರ್, ದಿನೇಶ್ ಪುತ್ರನ್, ಹರೀಶ್ ಕಿಣಿ, ರಮೇಶ್ ಕಾಂಚನ್, ಕೆ. ಸದಾನಂದ ಶೆಟ್ಟಿ, ತಿಮ್ಮ ಪೂಜಾರಿ, ಕಿರಣ್ ಹೆಗ್ಡೆ, ನಾಗೇಶ್ ಉದ್ಯಾವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions