Advertisement

ಪಶ್ಚಿಮ ಬಂಗಾಳದಲ್ಲಿ ಕ್ರೈಸ್ತರ ಮೇಲಿನ ದಾಳಿ ಖಂಡನೀಯ: ಚಾರ್ಲ್ಸ್ ಅಂಬ್ಲರ್

ಸಂವಿಧಾನದ ವಿಧಿ 25ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಂತಃಕರಣದ ಪ್ರಕಾರ ಯಾವುದೇ ಧರ್ಮವನ್ನು ನಂಬಲು, ಆಚರಿಸಲು ಹಾಗೂ ಪ್ರಚಾರ ಮಾಡಲು ಹಕ್ಕು ಇದೆ. ಈ ಮೂಲಭೂತ ಹಕ್ಕುಗಳನ್ನು ದಮನಿಸುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ನಿಕಟಪೂರ್ವ ಅಧ್ಯಕ್ಷ **ಚಾರ್ಲ್ಸ್ ಅಂಬ್ಲರ್** ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಿದೆ. ಆದರೆ ಸಂಘ ಪರಿವಾರದ ಕೆಲವು ಸಂಘಟನೆಗಳು ಧಾರ್ಮಿಕ ಸ್ವಾತಂತ್ರ್ಯವನ್ನು ದಮನಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದ್ದಾರೆ.

**“ಕ್ರೈಸ್ತರ ಮೇಲೆ ನಡೆಯುವ ದಾಳಿಗಳನ್ನು ಧರ್ಮ, ಜಾತಿ ಹಾಗೂ ಪಕ್ಷಭೇದ ಮರೆತು ಪ್ರತಿಯೊಬ್ಬ ದೇಶದ ನಾಗರಿಕರೂ ಖಂಡಿಸಬೇಕು. ಯಾವುದೇ ಧರ್ಮದ ಜನರ ಮೇಲಿನ ದಾಳಿ ಸಂವಿಧಾನಬದ್ಧ ಹಕ್ಕುಗಳ ಮೇಲಿನ ದಾಳಿಯಾಗಿದೆ”** ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿಗಳು ನಡೆಯುತ್ತಿವೆ ಎಂಬ ವರದಿಗಳು ಆತಂಕ ಮೂಡಿಸಿವೆ. ಕ್ರೈಸ್ತರ ಮನೆಗಳಲ್ಲಿ ನಡೆಯುವ ಗುಂಪು ಪ್ರಾರ್ಥನಾ ಸಭೆಗಳಿಗೆ ನುಗ್ಗಿ ಹಲ್ಲೆ ನಡೆಸುವುದು, ಬೆದರಿಕೆ ಹಾಕುವುದು ಮಾತ್ರವಲ್ಲದೆ, ಮೃತರ ಅಂತ್ಯಕ್ರಿಯೆಗೂ ಅಡ್ಡಿಪಡಿಸಿದ ಘಟನೆಗಳು ವರದಿಯಾಗಿರುವುದು ಅತ್ಯಂತ ಅಮಾನವೀಯ ಎಂದು ಚಾರ್ಲ್ಸ್ ಅಂಬ್ಲರ್ ಹೇಳಿದ್ದಾರೆ.

ಆಗಸ್ಟ್ 23ರಂದು ಹೌರಾ ಜಿಲ್ಲೆಯ ಉಲುಬೇರಿಯಾ ಪ್ರದೇಶದಲ್ಲಿ ಕ್ರೈಸ್ತರ ಮನೆಯೊಂದರಲ್ಲಿ ನಡೆಯುತ್ತಿದ್ದ ಶಾಂತಿಯುತ ಗುಂಪು ಪ್ರಾರ್ಥನಾ ಸಭೆಗೆ ದೊಡ್ಡ ಗುಂಪೊಂದು ನುಗ್ಗಿ ದಾಂಧಲೆ ನಡೆಸಿದ ಘಟನೆ ಇದಕ್ಕೆ ಉದಾಹರಣೆಯಾಗಿದೆ. ಪ್ರಾರ್ಥನೆಯಲ್ಲಿ ಭಾಗವಹಿಸಿದ್ದವರ ಮೇಲೆ ಹಲ್ಲೆಗೆ ಯತ್ನಿಸಿ ಭೀತಿ ಸೃಷ್ಟಿಸಲಾಗಿದ್ದು, ದಾಳಿಕೋರರ ಆಕ್ರೋಶಕ್ಕೆ ಗುರಿಯಾಗಿದ್ದ ಧರ್ಮಪ್ರಚಾರಕ (ಪಾಸ್ಟರ್) ಮಿಥುನ್ ಹಜ್ರಾ ಸೇರಿದಂತೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದವರನ್ನು ಪೊಲೀಸರು ಸ್ಥಳಕ್ಕೆ ಧಾವಿಸಿ ಸುರಕ್ಷಿತವಾಗಿ ಪಾರು ಮಾಡಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ಪೂರ್ವ ಬರ್ಧಮಾನ್ ಜಿಲ್ಲೆಯ ಸಹಾನಗರದ ಸೇಂಟ್ ಕ್ಲಾರೆಟ್ ಚರ್ಚ್ ಸ್ಮಶಾನದಲ್ಲಿ ನಡೆಯುತ್ತಿದ್ದ ಕ್ರೈಸ್ತರ ಶವಸಂಸ್ಕಾರಕ್ಕೆ ದುಷ್ಕರ್ಮಿಗಳ ಗುಂಪೊಂದು ಅಡ್ಡಿಪಡಿಸಿದ ಆರೋಪವೂ ಗಂಭೀರವಾಗಿದೆ. ಅಂತ್ಯಕ್ರಿಯೆಗೆ ಅಡ್ಡಿಪಡಿಸುವುದರ ಜೊತೆಗೆ ಹೂಳಲಾಗಿದ್ದ ಶವವನ್ನು ಸಮಾಧಿಯಿಂದ ಹೊರತೆಗೆದ ಅಮಾನವೀಯ ಕೃತ್ಯ ನಡೆದಿದೆ ಎಂದು ಸ್ಥಳೀಯ ಧರ್ಮಗುರುಗಳು ಆರೋಪಿಸಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಜುಲೈ 5ರಂದು ದಕ್ಷಿಣ 24 ಪರಗಣ ಜಿಲ್ಲೆಯ ಸುಭಾಷ್‌ಗ್ರಾಮ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚ್ ಮೇಲೆ ದಾಳಿ ನಡೆಸಿ, ಆವರಣದಲ್ಲಿದ್ದ ಪವಿತ್ರ ಶಿಲುಬೆಗಳನ್ನು ಧ್ವಂಸಗೊಳಿಸಿದ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಲವಂತದ ಮತಾಂತರದ ಆರೋಪಗಳನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದ ಮೇಲೆ ನಿರಂತರ ದಾಳಿ, ಬೆದರಿಕೆ ಹಾಗೂ ಕಿರುಕುಳ ನೀಡುವುದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಶೋಭೆ ತರುವುದಿಲ್ಲ. ಇಂತಹ ಘಟನೆಗಳಿಂದಾಗಿ ಕ್ರೈಸ್ತರು ತಮ್ಮ ಮನೆಗಳಲ್ಲಿ ನಡೆಸುತ್ತಿದ್ದ ಸಾಂಪ್ರದಾಯಿಕ ಪ್ರಾರ್ಥನಾ ಸಭೆಗಳನ್ನು ಕೂಡ ನಿಲ್ಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಾರ್ಲ್ಸ್ ಅಂಬ್ಲರ್ ಆತಂಕ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುವ ದಾಳಿಗಳನ್ನು ತಡೆಯಲು ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು. ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಭದ್ರತೆ ಒದಗಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions