Advertisement

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಅಕ್ರಮ ಆರೋಪ: ಉನ್ನತ ಮಟ್ಟದ ತನಿಖೆಗೆ ಕೋಟ ನಾಗೇಂದ್ರ ಪುತ್ರನ್ ಆಗ್ರಹ

ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಡಳಿತದಲ್ಲಿ ಗಂಭೀರ ಅಕ್ರಮಗಳು ಮತ್ತು ಸರಕಾರಿ ಆದೇಶ ಉಲ್ಲಂಘನೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ಪರವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್, ಸಂಬಂಧಪಟ್ಟ ಎಲ್ಲಾ ವಿಚಾರಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಮೂಲತಃ ಆರೋಗ್ಯ ಇಲಾಖೆಗೆ ಸೇರಿದ ಅಧಿಕಾರಿ ಶ್ರೀ ಅಜಯ್ ಭಂಡಾರ್ಕರ್ ಅವರಿಗೆ ಕರ್ನಾಟಕ ಸರ್ಕಾರವು ಮೇ 7ರಂದು ಹೊರಡಿಸಿದ ಆದೇಶದಂತೆ ತಕ್ಷಣ ಮೂಲ ಇಲಾಖೆಗೆ ಹಿಂತಿರುಗುವಂತೆ ಸೂಚಿಸಿದ್ದರೂ, ಅವರು ಇನ್ನೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹುದ್ದೆಯಲ್ಲಿ ಮುಂದುವರಿಯುತ್ತಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಪುತ್ರನ್ ಆರೋಪಿಸಿದ್ದಾರೆ.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹುದ್ದೆ KAMS ಅಧಿಕಾರಿಗಳಿಗೆ ಮೀಸಲಾಗಿದ್ದರೂ, ಬೇರೆ ಇಲಾಖೆಯ ಅಧಿಕಾರಿ ಮುಂದುವರಿಯುತ್ತಿರುವುದು ಗಂಭೀರ ಆಡಳಿತಾತ್ಮಕ ವೈಫಲ್ಯ ಎಂದು ಅವರು ತಿಳಿಸಿದ್ದಾರೆ. ಸರಕಾರಿ ಆದೇಶ ಹೊರಬಂದ ನಂತರವೂ ಅವರು ಕಚೇರಿ ಸಮಯದ ಒಳಗೂ ಹೊರಗೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನಗಳಿಗೆ ಕಾರಣವಾಗಿದ್ದು, ಇದರ ಹಿಂದೆ ಅಕ್ರಮ ಅಥವಾ ಅವ್ಯವಹಾರಗಳಿರುವ ಸಾಧ್ಯತೆ ಕುರಿತು ಸಮಗ್ರ ತನಿಖೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ, ಸಾರ್ವಜನಿಕ ವಿರೋಧದ ನಡುವೆಯೂ ನದಿ ತೀರದ ಬಳಿ ಘನ ತ್ಯಾಜ್ಯ ನಿರ್ವಹಣಾ ಘಟಕ (SWM) ತುರ್ತುಗತಿಯಲ್ಲಿ ಸ್ಥಾಪಿಸಲ್ಪಟ್ಟಿದ್ದು, ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಕುರಿತು ಸ್ಪಷ್ಟತೆ ಇಲ್ಲ ಎಂದು ಆರೋಪಿಸಲಾಗಿದೆ. ಈ ಯೋಜನೆಯ ಅವಶ್ಯಕತೆ, ವೆಚ್ಚ ಹಾಗೂ ಕಾರ್ಯಕ್ಷಮತೆ ಕುರಿತು ಸಾರ್ವಜನಿಕರಲ್ಲಿ ಪ್ರಶ್ನೆಗಳು ಉದ್ಭವಿಸಿರುವುದಾಗಿ ತಿಳಿಸಿದ್ದಾರೆ.

ಇದಲ್ಲದೆ, ಕಡಿಮೆ ಅವಧಿಯಲ್ಲಿ ಪಾರಂಪಳ್ಳಿ ಡಾಲರ್ಸ್ ಕಾಲೋನಿ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಭೂಮಿ ಹಾಗೂ ದುಬಾರಿ ವಾಹನ ಖರೀದಿಸಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಆಸ್ತಿ ಸಂಗ್ರಹಣೆಯ ಮೂಲ ಕುರಿತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಸಿದ್ಧ ವ್ಯಕ್ತಿಗಳ ಪುತ್ಥಳಿ ನಿರ್ಮಾಣಕ್ಕಾಗಿ ಸಂಗ್ರಹಿಸಲಾದ ನಿಧಿ, ಅಪೂರ್ಣ ಪುತ್ಥಳಿಗಳು ಹಾಗೂ ಸುವರ್ಣ ಮಹೋತ್ಸವದ ನಿಧಿಗಳ ಲೆಕ್ಕಾಚಾರ ಬಹಿರಂಗವಾಗದಿರುವುದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ಉಂಟಾಗಿದೆ ಎಂದು ತಿಳಿಸಿದ್ದಾರೆ.

“ಸ್ಥಳೀಯ ಜನರ ಆರೋಗ್ಯ ಹಾಗೂ ಪರಿಸರದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಅಧಿಕಾರಿಗಳು ಊರಿನ ಅಭಿವೃದ್ಧಿಗೆ ಕೆಲಸ ಮಾಡಬೇಕು ಹೊರತು, ವೈಯಕ್ತಿಕ ಆಸ್ತಿ ಸಂಪಾದನೆಗೆ ಆದ್ಯತೆ ನೀಡಬಾರದು” ಎಂದು ಪುತ್ರನ್ ಅಭಿಪ್ರಾಯಪಟ್ಟಿದ್ದಾರೆ.

ಸರಕಾರಿ ಆದೇಶವನ್ನು ತಕ್ಷಣ ಜಾರಿಗೊಳಿಸಿ ಸಂಬಂಧಪಟ್ಟ ಅಧಿಕಾರಿಯನ್ನು ಹುದ್ದೆಯಿಂದ ತೆರವುಗೊಳಿಸುವುದು, ಈ ಅವಧಿಯ ಹಣಕಾಸು ಹಾಗೂ ಆಡಳಿತಾತ್ಮಕ ವ್ಯವಹಾರಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅತ್ಯಾವಶ್ಯಕ ಎಂದು ಅವರು ಒತ್ತಾಯಿಸಿದ್ದಾರೆ.

ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನುಬದ್ಧ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions